Posts

Showing posts from November, 2019

ನಮ್ಮ ಕಥೆ

ಯಾರದೋ ಪುಣ್ಯ ಆದೆವು ಧನ್ಯ ತಿರುಗಾಡಿ ತಿನ್ನುತ್ತ ಬತ್ತಲೆಯ ಮೈಯತ್ತ ಅರಿವ ಪಡೆಯುತ್ತ ಸಾಗಿದೆವು ಶತಶತಮಾನಗಳಿಂದಿತ್ತ… ನೆಲದ ಮೇಲೆ ಕಂಡೆದ್ದೆಲ್ಲ ಬೇಡಿ ರಚ್ಚೆ ಹಿಡಿದು ಉಚ್ಚೆ ಹೊಯ್ದು ಆಕಾಶದಲೂ ಸಹ ತಡಕಾಡಿ ಮತ್ತೆ ಹೇತ ನೆಲದ ಎದೆಯೊಳಗಿಳಿದು ಯಂತ್ರಕೈಗಳಿಂದ ಬಗೆದು ಮನೆ ಮಠ, ಗುಡಿ ಗುಂಡಾರ, ಚರ್ಚು ಮಸಜೀದುಗಳ ಕಟ್ಟಿ ಅಲ್ಲಲ್ಲಿ ಆತ್ಮ ತೊಳೆಯುತ್ತ… ಉಸಿರ ಊಡುವ ಉಸಿರ್ಗಾಳಿಗೆ ಹೇಸಿಗೆಯ ಮೆತ್ತಿ ಮೊಗೆದು ಕುಡಿವ ಅಪ್ಪುವಿನ ಕರುಳಿಗೆಲ್ಲ ಮಲಿನತೆಯ ಸವರಿ ಮಣ್ಣ ಮಾರಿ ಬೆಲೆ ಕಟ್ಟಿದ ನಮ್ಮ ಈ ಅರಿವಿಗೆ ಬಾರದಾಯಿತು ಮಣ್ಣು ನಮಗೆ ಬೆಲೆ ಕಟ್ಟದೆಂದು ನನ್ನ ಬಯಸುವೆ ನೀ ನಿನ್ನನೂ ನಾ ಬಯಸದೇ ಇರನೆಂದಿತು ಮಣ್ಣು.. ಜೀವಕೆ ತಂಪಿಟ್ಟು ನೆರಳಿಟ್ಟು ಪೊರೆದ ಹಸಿರಿಗೆ ಕಸಿರಂತೆ ಕಂಡು ಮೈಯ ಸೀಳುವಾಗ ರಕ್ತ ಮಾಂಸವಿರಲಿಲ್ಲ.. ಕಾಂಕ್ರೀಟಿನ ಕಾಡು ಗೊಂದಲದ ಗೂಡು ನಮ್ಮೊಳಗೆ ನಮ್ಮದೇ ದೌಡು.. ಹೊಟ್ಟೆ ಕೆಡವಿದ ಬಾಣಂತಿಯಂತೆ ಭೂತಾಯಮ್ಮನ ಪಾಡು.. ಮೆರೆದಿವಿಲ್ಲಿ ಮೆದುಳೊಂದನೆ ಮೆರೆಸಿ, ಮೈಯಿಂದ ಮನಸನಷ್ಟೇ ಹೊರಗಿರಿಸಿ, ನೊಂದ ಪ್ರಕೃತಿಯು ತಾಳದಂತಾಗಿ ಪಂಚಭೂತಗಳೆಲ್ಲ ಒಂದಾಗಿ, ಹೆಣೆದ ಸಣ್ಣ ಸ್ಥಿತಿಯನು ಎದುರಿಸದಾದೆವು.. ಬಗೆದಷ್ಟು ಸುಲಭವಲ್ಲ ಬದುಕು ಉಳಿಸಿಕೊಳ್ಳುವ ಬಗೆ ಇದರ ಮುನಿಸಿನ ಎದುರು ಸಲ್ಲ.. ಪ್ರಕೃತಿಗಿಂತ ಅಧಿಕರು ಮತ್ತಾರೂ ಇಲ್ಲ.. — ರನ್ನ ಕಂದ