Posts

Showing posts from 2018

ಹುಡುಕಬೇಕಿದೆ ನೆಮ್ಮದಿಯನು...

  ಹುಡುಕಬೇಕಿದೆ ಬದುಕಿನ ಸಂದೂಕಿನಲ್ಲೊಂದಿಷ್ಟು ಹುದುಗಿಸಿಟ್ಟ ನೆಮ್ಮದಿಯನು ಅದಕಿದಕೆ ಎಡತಾಕದೆ ಹೆಚ್ಚೇನೂ ಕೆದಕದೆ ಅಡಕವಾದ ಬಾಳಿನೊಲುಮೆಯನು ಹುಡುಕಬೇಕಿದೆ ಇನ್ನು ಹುದುಗಿಸಿಟ್ಟ ನೆಮ್ಮದಿಯನು  ಹುಟ್ಟಿದಾಗ ನಮ್ಮೊಳಗಿತ್ತು ನಮ್ಮ ಬಳಗದಲೇ ಅದು ಕಳುವಾಗಿತ್ತು ಬೆಳೆ ಬೆಳೆಯುತ್ತ ಬಾಳುತ್ತ ಕಳೆದುಕೊಂಡೆವದನು ನಾವೆಲ್ಲ ಹುಡುಕಬೇಕಿದೆ ಇನ್ನು ಹುದುಗಿಸಿಟ್ಟ ನೆಮ್ಮದಿಯನು  ನಮ್ಮ ನಮ್ಮೊಳಗೆ ಬೆಳೆದು ಸುಮ್ಮ ಸುಮ್ಮನೆ ಸೆಳೆದು ಹಮ್ಮು ಬಿಮ್ಮಿನಲಿ ಕಳೆದು ಕೈ ಪೂರಾ ಖಾಲಿ ಉಳಿದು ಆಯಿತಲ್ಲ ಬದುಕು ಬಾರದಿಲ್ಲ ಎದಕು ಹುಡುಕಬೇಕಿದೆ ಇನ್ನು ಹುದುಗಿಸಿಟ್ಟ ನೆಮ್ಮದಿಯನು  ಒಲುಮೆಯನು ಉಟ್ಟು ನಗುನಗವ ತೊಟ್ಟು ಎಲ್ಲರೆದೆಯಲಿ ನಲುಮೆಯನು ನೆಟ್ಟು ಬಾಳಗುರಿಯನು ಮುಟ್ಟು ಹುಡುಕಬೇಕಿದೆ ಇನ್ನು ಹುದುಗಿಸಿಟ್ಟ ನೆಮ್ಮದಿಯನು --- ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

ಗಟ್ಟಿತನ…

  ಮಾತನು ಮೌನದೊಳಗೆ ಅಡಗಿಸಿಟ್ಟವರಿಗೆ ಹಾಡಬೇಕಿದೆ ಕ್ರಾಂತಿಗೀತೆಯ ಶಾಂತಿ ಕದಡುತಿಹ ಮನಸುಗಳಿಗೆ ಹಾಡಬೇಕಿದೆ ಕ್ರಾಂತಿಗೀತೆಯ       ಗಿಡದ ಹೂ ಬರಿ ಗಿಡಕೆ ಸೌಂದರ್ಯವಲ್ಲ ಅದು ಜಗದ ಸುಂದರತೆಯ ಕಿಡಿ ನಿನ್ನಿರವು  ಬರಿ ಈ ಸಂಬಂಧಗಳಿಗಷ್ಟೇ ಅಲ್ಲ ಹೃದಯದಿ ವಿಶ್ವಮಾನವತೆಯ ಮಿಡಿ       ನಡೆವ ನೆಲ ಕುಡಿವ ಜಲ ಸುಂಕ ಬೇಡುವ ಮುನ್ನ ಒಡ್ಡು ಎದೆಯನು ಸೀಳಲಿ ಶೂಲ ಬಾಳು ಪುಟಕಿಟ್ಟ ಚಿನ್ನ       ಹೊಳೆವ ನಕ್ಷತ್ರದಂತಿರು ದೂರದೂರದೆ ಮಾತ ಕೊಲುವವರಿಗೆ   ತೋರು ಒಡಲ ಬೆಂಕಿ ಆರದಾರದೆ ಮೃದುತನದಿ ಗಟ್ಟಿತನದ ಕುರುಹು ಗಟ್ಟಿಗೊಳ್ಳುವ ತನಕ ಅರುಹು ..         --- ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

ನಮಗೂ ಗ್ರಹಣ ಹಿಡಿದಿದೆ…

ನಾವೂ ಸಹ ಚಂದ್ರನಂತೆ ಕಲೆಯುಳ್ಳವರು ಬೆಲೆಯುಳ್ಳವರು ಗೆದ್ದ ಜನನಾಯಕರ ಭ್ರಮಿಸುತ್ತ ಗಮಿಸುವವರು   ಲೋಕ ‌ ಕಲ್ಯಾಣವೆಂಬ ಶುಭ್ರ ಸೂರ್ಯನೆಳಸಿ ನಾನಾ ರೀತಿಯಲಿ ಸಿಡಿಸಿಡಿದ ಜನನಾಯಕರು ಐದು ವರ್ಷದುದ್ದಕ್ಕೂ ವಿರಳ ರೇಖೆಯಲಿ ಬಂದು ಎದುರಾಗುತ್ತಾರೆ ಮರೆಮಾಡಿ ಎಲ್ಲವನು ಆಗ ಹಿಡಿಯುತ್ತದೆ ನೋಡಿ ಗ್ರಹಣ !   ಸ್ಪರ್ಶ ಕಾಲದ ಮುನ್ನ ಉದ್ದುದ್ದ ಭರವಸೆಗಳು ಮಾರುದ್ದ ಪ್ರಣಾಳಿಕೆಯಲಿ ಬಹಳಷ್ಟು ಆಸೆಗಳು ಜೀವ ತೇಯುತ ಕುಂತಿರುತ್ತವೆ ಕಲ್ಯಾಣ ಕಾರ್ಯಗಳು ಸ್ಪರ್ಶಿಸುತ್ತಲೇ ಎಲ್ಲವೂ ಮಸುಕು ಮಸುಕು ಜನನಾಯಕರ ಪ್ರಭಾವ ನಮ್ಮಂಥ ಚಂದಿರುಗಳ ಮೇಲೆ ಎಲ್ಲದಕೂ ಅಭಾವ   ಆಗಾಗ್ಗೆ ನಮಗೂ ಹಿಡಿದಿದೆ ಗ್ರಹಣ ಏನೂ ಕಾಣಿಸುವುದಿಲ್ಲ ಊಟ ತಿಂಡಿ ಶೌಚ ಎಲ್ಲವನು ಬದಿಗೊತ್ತಿ ಮೋಕ್ಷಕೆ ಕಾಯಲೇಬೇಕು ಕತ್ತಲೆಯಲೇ ಇರಬೇಕು ಮೋಕ್ಷಕೆ ಕಾಯಲೇಬೇಕು .. ನಮಗೆ ಹಿಡಿದ ಗ್ರಹಣ ಕಳೆವುದಿಲ್ಲ ನಾವು ಅರಿಯದಲೆ ಉಳಿವು ಇಲ್ಲ .   --- ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)