Posts

Showing posts from February, 2020

ಬೆಟ್ಟ

ದಿವ್ಯ ಮೌನದಿ ಧೇನಿಸುತ್ತಿತ್ತು ಬೆಟ್ಟ ಅಂಬೋಧಗಳ ಎದೆಗೆ ತಾಗಿಸಿಕೊಂಡು ಸುಳಿಸುಳಿವ ತಿಳಿಗಾಳಿಯ ಉಸಿರಾಡುತ್ತ ಸುತ್ತಮುತ್ತಿನದಕೆಲ್ಲ ಏಕಾಗ್ರಚಿತ್ತ ಅಂತರಂಗದೊಳಗೆ ಅವಿತ ಬೇಗೆಯೊಳಗೆ ಜಗವ ಸುಡುವ ಜಂಘಾಬಲ ಬಹಿರಂಗದೊಳಗೆಲ್ಲ ವಿಶ್ರಾಂತ ಮನಸ್ಥಿತಿಯಂತಹ ವಿಹಂಗಮ ಆಡುಂಬೋಲ ಬೆಟ್ಟವೊಂದು ನಿಶ್ಚಿಂತೆಯ ಪ್ರತಿಮೆ ಕೊರೆದರೂ ಸಹ ಮೆರೆವ ಸಂಭಾವಿತ ಅಂತಾಗಬೇಕು ಮನ ಎರಗುವ ಉಲ್ಕೆಗಳ ಕರಗಿಸಿಬಿಡಬೇಕು ನೋವು ನಲಿವುಗಳ ಜೋಡಿಸಿಡಬೇಕು ಒಮ್ಮೊಮ್ಮೆ ಸುರಂಗದಿ ಹಾದಿ ತೋರಿಸಬೇಕು.. ಬೆಟ್ಟ ಮೌನ ಮುರಿಯಲ್ಲ.. ಚಿತ್ತ ಬಿಟ್ಟು ಮುಂದುವರೆಯಲ್ಲ.. ---ರನ್ನ ಕಂದ

ಹೆಜ್ಜೆಗಳಳಿಯದೇ ಇರಲಿ

ಎದುರಿಗೆ ಎದುರಾಗಿವೆ ದಾರಿಗಳು ಹಲವು| ಗರಿಕೆ ಬೆಳೆಯದೇ ದಾರಿ ತೋರಿವೆ ಹೆಜ್ಜೆಗಳು ಕೆಲವು| ನಡೆಯಬೇಕಿದೆ ಹುಡುಕಬೇಕಿದೆ ನಾವು ಕೈತಂದ ಕಾರ್ಯಗಳ| ಹುಟ್ಟಿ ಸಾಯುವ ಮಧ್ಯೆ ಕೆದಕಬೇಕಿದೆ ನೋವು ನಲಿವಿಂದ ಧೈರ್ಯಗಳ| ಇರಲಿ ನಿಸರ್ಗ ಸಗ್ಗಕೆ ನಮ್ಮ ನಿಮ್ಮೆಲ್ಲರ ವಂದನೆ| ಬರಲಿ ಸುಗ್ಗಿಯಾಗಿ ಸ್ನೇಹವಿಂದು ಪ್ರೇಮವಾಗಲಿ ಈಗ ಸ್ಪಂದನೆ| ದಾರಿಗಳ ನಡುವೆ ಸಿಕ್ಕ ಹೆಜ್ಜೆಗಳಳಿಯದೇ ಇರಲಿ| ಮನಸುಗಳ ಒಳಗೆ ನಕ್ಕ ನಗೆಗಳು ನಳನಳಿಸುತಿರಲಿ| --- ರನ್ನ ಕಂದ

ಆಶಯ

ನೆಲದ ತವಕ ಸಸಿಗೆ ನೆವಕ ರವಿಯ ಬೆಳಕು ಹೃದಯ ಸ್ಪರ್ಶ ಹೊಸದೊನ್ದು ಬದುಕು.. ಎದೆಯ ಗುಡಿಯಲಿ ತಮದ ಜಾಡು ಅರಿವ ಬೆಳಕಿನ ಕೋಲು ಪುನಃ ತಮದ ಸೋಲು ತನುವ ಪಣತಿಗೆ ಒಲುಮೆ ತೈಲವ ತುಮ್ಬಿ ಅರಿವ ಕಿಡಿ ಮುಡಿಸಬೇಕು ಬದುಕೇ ಹೊಸ ಬೆಳಕು ಅದು ಜಗವ ಬೆಳಗಬೇಕು.. --ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

ಬದುಕಿಗೆ ಅವಳನು ಆಹ್ವಾನಿಸಿರುವೆ...

ನಾ ಎದುರಾದಾಗಲೆಲ್ಲ ಅವಳ ಕೊರಳ ದನಿಗೆ ಬರಗಾಲ ಮಾತೆಲ್ಲ ಮೌನದಲಿ ಸೇರಿ ಮೌನವೂ ಒಂದು ಸಿಹಿಗಾಲ ಅವಳೆದುರಾದಾಗಲೂ ನಾ ನಿರ್ಲಿಪ್ತ ಕಣ್ಣುಗಳ ನಡುವೆ ನಡೆದು ಹೋಗುವುದು ಭಾವಗಳ ವ್ಯವಹಾರ ಅವಳು ದೂರದಿಂದಲೇ ದೂರುತ್ತಾಳೆ ಮಾತಾಗದ ಮೌನವನು ನಾನದನು ಮನ್ನಿಸುತಲೇ ಮಾತು ಮರೆಯುತ್ತೇನೆ ಬದುಕಿಗೆ ಅವಳನು ಆಹ್ವಾನಿಸಿರುವೆ ಒಲುಮೆಯನು ಇಂಚಿಂಚು ಹಂಚಿಕೊಳಲು ಮೌನದಲಿ ಬೆರೆತ ಮಾತುಗಳ ಬಿಚ್ಚಿಕೊಡಲು ಹರೆಯದ ಹಾದಿಯ ನಡುವೆ ಮರೆಯದೇ ಅವಳ ದಾರಿ ಕಾಯುತ್ತಿದ್ದೇನೆ ಮತ್ತೇ ಮೌನ ಕವಿಯದಿರಲೆಂದು ಮಾತು ಮೌನ ಮುರಿಯಲೆಂದು.. ---ರನ್ನ ಕಂದ

ಧರ್ಮೋ ರಕ್ಷತೀ...

ಧರ್ಮ ಎಂದಾಗ ನಗು ಈಗೀಗ ಧರ್ಮೋ ರಕ್ಷತಿ ರಕ್ಷಿತಃ ಎಲ್ಲಿ ಯಾರನು ರಕ್ಷಿಸುತಿದೆ ಧರ್ಮ? ಯಾರು ಮಾಡಿದ ಕರ್ಮ..? ಕೆಟ್ಟತನದ ಜತೆ ಆತ್ಮದ ಹೋರಾಟಕ್ಕೆ ಜಿಹಾದ್ ಎಂದರು ಪೈಗಂಬರ್ ಸಲ್ಲದ ಅರ್ಥಗಳ ಹಡೆದು ಧರ್ಮವನೆ ಒಡೆದು ಸಾವುಗಳು ಅಪ್ಪುತಿವೆ ಕೊಳಕುಗಳ ಎರೆದು ಮಜ್ಜನ ಗೈವವರ ನಡುವೆ ಸಜ್ಜನರು ಹೇಗೆ ಬದುಕಿಯಾರು? ಎಂಜಲುಗಳ ಮೇಲೆ ಉರುಳಾಡಿ ಧರ್ಮೋ ರಕ್ಷತಿ ಎನ್ನುವವರು ಸಿಡಿಬಾಂಬುಗಳ ಸಿಡಿಸಿ ಕಾಫಿರರನ್ನು ಅಳಿಸಿ ಧರ್ಮ ಕಟ್ಟಲಾರಿರಿ ಎದೆಯ ಗೂಡಲಿ ಬೀಡು ಬಿಟ್ಟ ಮಾನವತೆಯೇ ಧರ್ಮ ; ಅದ ಮುಟ್ಟಲಾರಿರಿ ಸಹ ನಿಮ್ಮ ತುಪಾಕಿಗಳು, ಮಷಿನು ಗನ್ನುಗಳಿಗೆ ಯಾವ ಧರ್ಮವಿದೆ? ಎದೆಯ ಬಗೆದು ರಕ್ತ ಕುಡಿವ ಧರ್ಮವಿದೆಯೇ? ನೀವು ಅವರ ದೇಹಗಳ ಕೊಲ್ಲಬಲ್ಲಿರಿ ದೇಶ ಪ್ರೇಮವ ಕೊಲ್ಲಲಾರಿರಿ.. ನಿಮ್ಮ ಮೊಂಡು ವಾದಗಳಿಗೆ ಚೂಪಾದ ಕತ್ತಿಯೊಂದು ಕಾಯುತ್ತಲಿದೆ.. ನಿಮ್ಮ ಅನಿಷ್ಟ ಧರ್ಮದ ಅಂತ್ಯಕ್ಕಾಗಿ... --- ರನ್ನ ಕಂದ(ಸಚಿನ್ ಕುಮಾರ ಬ.ಹಿರೇಮಠ)

ಅಪ್ಪ...

ಅಪ್ಪ ನನಗಿಷ್ಟ ಅವ ನನಗಾಗಿ ಏನನ್ನೂ ಸಂಪಾದಿಸಲಿಲ್ಲ ಕಷ್ಟಗಳ ಮಧ್ಯೆ ನಗುವ ಕಲೆಯನ್ನು ಸುಳ್ಳುಗಳ ನಡುವೆ ಸತ್ಯವಂತನಾಗುವ ಬಗೆಯನ್ನು ಸದ್ಯಕ್ಕೆ ಉಪಯೋಗಕ್ಕೆ ಬಾರದ ಮೌಲ್ಯಗಳನ್ನು ಸಂಪಾದಿಸಿ ಕೊಟ್ಟ, ಕಲಿಸಲಿಲ್ಲ ತಾ ಕಲಿತ ಚಟಗಳನು ಬದಲಿಸದೇ ಬಂದ ಹಠಗಳನು ತನಗಾಗಿ ಬದುಕುವುದ ಕಲಿಸಲಿಲ್ಲ ಅಪ್ಪನ ಮಾತುಗಳಲಿ ಹರಿಶ್ಚಂದ್ರ ಕಂಡ, ಬುದ್ಧ ,ಬಾಪು, ಸೋಮಾರಿ ಭಿಕಾರಿ,ಜಾಣ,ಹುಚ್ಚ ಹೀಗೆ ಎಲ್ಲರೂ ಪುಂಖಾನುಪುಂಖವಾಗಿ ಬಂದು ಹೋದರು ಅಪ್ಪ ನನಗೆ ದಾರಿ ತೋರದೆಯೂ ಮಾದರಿಯಾದ --ರನ್ನ ಕಂದ

ಗಝಲ್

ಮತ್ತದೇ ಸಂಜೆಯಲಿ ನೆನಪಾಗಬೇಡ ಎಲ್ಲ ಮರೆತಿರುವಾಗ ಕನಸಿನ ದಾರಿಯಲಿ ಎದುರಾಗಬೇಡ ಎಲ್ಲ ಮರೆತಿರುವಾಗ ದಾರಿಯ ಹೂಗಳು ಅರಳಿ ನಿಂತಿವೆ ಎಂದಿನಂತೆ  ಮುಡಿಯೇರಲು ಮುಳ್ಳುಗಳ ಭಯವೀಗ ಕೀಳಬೇಡ ಎಲ್ಲ ಮರೆತಿರುವಾಗ ನಿನ್ನೆಗಳ ಕನ್ನಡಿಯೊಳಗೆ ನನ್ನ ನಾ ನೋಡಿಕೊಂಡೆ ಅನುದಿನ ಎಲ್ಲೆ ಮೀರಿ ಕಲ್ಲುಗಳ ಬೀಸಬೇಡ ಎಲ್ಲ ಮರೆತಿರುವಾಗ ಕರಿಇರುಳ ಸೆರಗಲ್ಲಿ ತಾರೆಗಳ ಕೂಡಿ ಚಂದ್ರ ನೆನಪಿಸುತಿಹ ಸರಿಇರುಳ ಸರಸವನು ನೆನಪಿಸಬೇಡ ಎಲ್ಲ ಮರೆತಿರುವಾಗ ಮೆಹಫಿಲ್ಲಿನ ಮಂದಿಗೆ ನಿಶೆಯೇರಿದ ಮೇಲೆ ಮನಸೇ ವಿಮಾನ ನಿನ್ನ ಕಣ್ಣುಗಳನ್ನು ಹಾಯಿಸಬೇಡ ಎಲ್ಲ ಮರೆತಿರುವಾಗ 'ರನ್ನ ಕಂದ' ನ ಎದೆಯಲಿ ತಿಳಿ    ನೀರ ಕೊಳವಿರಲಿ ಸದಾಕಾಲ ಮತ್ತೆ ನೆನಪುಗಳ ಸುರುವಿ ಕಲಕಬೇಡ ಎಲ್ಲ ಮರೆತಿರುವಾಗ --- ರನ್ನ ಕಂದ

ಅನುರಕ್ತ...

ಹೇಗೆ ಹೊಗಳಲಿ ನಿನ್ನ ನಾನು ಮನದ ಚೆಲುವ ಸಿರಿಯನು ಹೀಗೆ ಸಾಗಲಿ ಬಾಳು ಇನ್ನು ಬೇರೆ ಏನನು ಬಯಸೆನು ಎದೆಯ ಒಳಗೆ ಒಲವ ಸುರಿದು ಪ್ರೇಮದರಮನೆ ರಚಿಸಿದೆ ಮಧುರ ಅಧರ ಅಧರ ಬೆಸೆದು ಬಾಳ ತಿನಿಸನು ರುಚಿಸಿದೆ ಹೊರಗೆ ಚೆಲುವು ಒಳಗೆ ಒಲವು ಹೆಣ್ಣೇ ನೀನು ಪ್ರಕೃತಿ ಮುನಿಸು ವಿರಹ ಸರಿಯೇ ಸನಿಹ ಕಣ್ಣ ಕಣ್ಣಲೇ ಸ್ವೀಕೃತಿ ತನ್ನ ತಾನೇ ಉರಿದು ಬೆಳಕ ಬೀರುವಂತೆ ನಂದಾದೀಪ ನನ್ನ ಉಸಿರು ಇರುವ ತನಕ ಮರೆಯಲಾರೆ ನಿನ್ನ ರೂಪ ಯಾವ ನೋವು ಯಾವ ನಲಿವು ಏನೇ ಬಂದರೂ ಸಮ್ಮತ ನನ್ನ ನಿನ್ನ ಪ್ರೀತಿಯೊಂದೇ ಇರಲಿ ಎಂದೂ ಶಾಶ್ವತ --- ರನ್ನ ಕಂದ