Posts

Showing posts from October, 2016

ನವ ಕರ್ನಾಟಕ ಪ್ರಕಾಶನ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ....

Image
ನಾನು ಪ್ರತಿ ಸಲ ವಿಜಯಪುರಕ್ಕೆ ಹೋದಾಗ ಗಾಂಧೀ ವೃತ್ತದ ಮುಂದಿನ ರಸ್ತೆಯಲ್ಲಿನ ನಗರ ಸಭೆ ಕಟ್ಟಡದ ಪಕ್ಕದಲ್ಲಿ ತಪ್ಪದೇ ಕಣ್ಣು ಹಾಯಿಸುತ್ತೇನೆ. ಅಲ್ಲಿ ಈಗ ಮಾಸ್ಟರ್ ಪ್ಲ್ಯಾನ್ ಬಂದು  ಎಲ್ಲ ಬದಲಾಗಿದೆ. ಮೊದಲು ಅಲ್ಲಿ 'ನವಕರ್ನಾಟಕ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ'  ಎಂಬ ಖಾಯಂ ಶೆಡ್ಡೊಂದು ಸದಾ ಕಾಣ ಸಿಗುತ್ತಿತ್ತು. ಅದನ್ನು ದೂರದಿಂದಲೇ ಕಂಡಾಗ ನನ್ನ ಬಾಲ್ಯದ ಕೆಲ ಮಧುರ ನೆನಪುಗಳಿಗೆ ರೆಕ್ಕೆ ಬಂದಂತಾಗಿ ನೆನಪಿನಂಗಳದಲ್ಲಿ ಹಾರಾಡಿ ಕಣ್ಣು ತೋಯಿಸುತ್ತಿದ್ದವು.       1998 ರ ಇಸವಿ. ಆಗ ನಾನು ಒಂಭತ್ತನೆಯ ತರಗತಿ ಓದುತ್ತಿದ್ದೆ. ನನಗೆ ನಂಮ ಕನ್ನಡ ಮೇಷ್ಟ್ರು ಶ್ರೀ ಜಿ.ಕೆ.ಪಾಟೀಲ್ ಅಂದ್ರೆ ಪಂಚ ಪ್ರಾಣ. ಕಾರಣ ಅವರು ಕನ್ನಡವನ್ನು ಕೇವಲ ಕಲಿಸುತ್ತಿರಲಿಲ್ಲ.. ಕನ್ನಡ ಭಾಷೆಯ ರಸಾನುಭಾವಗೈಯ್ಯುತ್ತಿದ್ದರು. ರನ್ನನ 'ಗದಾಯುದ್ಧ' ದಲ್ಲಿನ 'ಕುರುಕುಲಾರ್ಕುನುಮರ್ಕನುಮಸ್ತಮೆಯ್ದಿದರ್' ಎಂಬ ಕಾವ್ಯ ಭಾಗವನ್ನು ವಿವರಿಸುವಾಗಲಂತೂ ಅವರು ಮಗುವಿನಂತೆ ಅತ್ತಿದ್ದು, ಆ ಕಾವ್ಯದಲ್ಲಿ ಸುಯೋಧನನ ದುರಂತ ಅಂತ್ಯವನ್ನು ತಿಳಿದು ನಾವೂ ಅತ್ತಿದ್ದು ಮರೆಯಲಾಗದ್ದು. ಹೀಗೆ ಸರಾಗವಾಗಿ ಹಳಗನ್ನಡವನ್ನು ನಿರರ್ಗಳವಾಗಿ ಓದುತ್ತಿದ್ದ ಅವರ ಭಾಷಾ ಪ್ರೌಢಿಮೆಯ ಬಗ್ಗೆ ಹೇಳತೀರದು. ಹೀಗೆ ಭಾಷೆಯ ಬಗೆಗೆ ಹೇಗೆ  ಪ್ರೀತಿ ಬೆಳೆಸಿಕೊಳ್ಳಬೇಕೆಂದು  ಅವರಲ್ಲಿ ಕೇಳಿದಾಗ ಅವರು ಹೇಳಿದ್ದ ಮಾತು ಒಂದೇ. "ಕನ್ನಡ ಪುಸ್ತಕ...

ಇರುಳೆಲ್ಲ ವಟಗುಟ್ಟಿದರೂ...ಮಂಡೂಕ ಲಹರಿ..

Image
--- ರನ್ನ ಕಂದ (ಸಚಿನ್ ಕುಮಾರ ಬ.ಹಿರೇಮಠ) ಇರುಳೆಲ್ಲ ವಟಗುಟ್ಟಿದರೂ ನನ್ನ ಬವಣೆ ತೀರಲಿಲ್ಲ... ಎಲ್ಲಿಯೋ ಹುದುಗಿ ಬಚ್ಚಿಟ್ಟು ಕೊಂಡರೂ ಬದುಕ ದಾರಿ ತೋರಲಿಲ್ಲ... ನಿನ್ನೊಳಗೊಂದು ಮಿಂಚು ನಿನಗೆ ಕಂಡಿತ್ತು ಜಗವ ತೊಳೆವ ಹುಚ್ಚು ಹಿಡಿದಿತ್ತು.. ಅದೆಂಥ ಧ್ಯಾನವದು ಬೋಧಿ ವೃಕ್ಷದ ಕೆಳಗೆ ನಾನೆಂತೂ ಅರಿಯೇ ಈ ಕಲ್ಲು ಪೊಟರೆಯೊಳಗೆ ನೀ ನಕ್ಕ ನಗೆಯೆಲ್ಲವುಗಳಲಿ ಅವಿತಿತ್ತು ಆತ್ಮ ಸಾಕ್ಷಿಯ ಜ್ಯೋತಿ ನೀ ಇಟ್ಟ ಹೆಜ್ಜೆಗಳಡಿಯಲ್ಲಿ ಜನಿಸಿತ್ತು ಆತ್ಮ ಜ್ಞಾನದ ಪ್ರೀತಿ ನಿನ್ನ ಹೆಗಲೇರಿ ದಿಟ್ಟಿಸುತಿಹೆ ನೋಡಲಾಗುತ್ತಿಲ್ಲ ಆ ದಿವ್ಯ ಪ್ರಭೆ ಬಂಧಗಳ ಕಡಿದು ಬದುಕ ಪ್ರೀತಿಸುವ ಬಗೆಯ ಕಲಿಸಿದೆ ಗೆಲ್ಲುವ ಪರಿ ಸಾಧಿಸದೇ ಹಗೆಯ.. ನಿನ್ನಂತೆ ಎಲ್ಲವನೂ ಮೀರಿ ಬಾಳುವಾಸೆ.. ಬದುಕೆಂದರೆ ಆಸೆ-ನಿರಾಸೆ.. ಹೆಗಲ ಮೇಲೆ ಜಿಗಿದು ಕೂರುವ ಬದಲು.. ಸೇರಬಾರದಿತ್ತೇ ನಿನ್ನ ಪರಿಶುದ್ಧ ಎದೆಯ ಕಡಲು? (ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ..29/09/2016)

ರಕ್ತ ಒಂಮೊಂಮೆ ಕುದಿಯಲೇಬೇಕು..

Image
ರಕ್ತ ಒಂಮೊಂಮೆ ಕುದಿಯಲೇಬೇಕು ಅದು ಕೇವಲ ಶಾಂತಿ ಸಾರುವ ಬಿಳಿ ಕಣಗಳಿಗಿಂತಲೂ ನಂಮವರು ಕಾದಿ ಅಪಾಯಕ್ಕೊಳಗಾಗಿ ನೋವು ತೋರುವ ಕೆಂಪು ಕಣಗಳನ್ನೇ ವಿಪರೀತ ಹೊಂದಿದ್ದು... ಯುದ್ಧ ಸಾರ್ವಕಾಲಿಕ ಕೆಡಕು ಆದರೆ ದೇಶ- ಕಾಲದ ನಡುವೆ ಇದೆ ಸಾಕಷ್ಟು ಒಡಕು ಸಾಕಷ್ಟಿವೆ ಮನಸ್ಸನ್ನು ಡಿಫಾಲ್ಟ್ ಮಾಡುವ ಅನೇಕ ದಾರಿಗಳು ದುರಂತವೆಂದರೆ ದಾರಿಯುದ್ದಕ್ಕು ಸ್ವಾಗತಿಸುತಿವೆ ಅವೇ ಬೇಲಿಯ ಮುಳ್ಳು.. ಪ್ರೀತಿಯಿಂದ ಗೆಲ್ಲಬಹುದಿತ್ತು ಹಗೆಯ ಆದರವರೆದೆ ತುಂಬ ಕಂಡಿದ್ದೇವೆ ಬರಿ ದ್ವೇಷ ದಳ್ಳುರಿಯ ಹೊಗೆಯ ಮುಂದಾದರೂ ಕಾಣಬಲ್ಲೆವಾ ಸ್ನೇಹದಾ ನಗೆಯ? ಶಾಂತಿ ದೂತನ ಗಡಿ ಪಾರು ಮಾಡಿದ್ದು ಯಾರು? ಇತಿಹಾಸದ ಎದೆಯ ಹೊಕ್ಕಿ ಬಗೆದ ಸತ್ಯ ಶಾಂತಿ ಎಂದೂ ಕ್ರಾಂತಿಯನ್ನುಂಟು ಮಾಡುವುದಿಲ್ಲ.. ಕ್ರಾಂತಿಯಾಗದೇ ಯಾವುದೂ ಬದಲಾಗುವುದಿಲ್ಲ.. ರಕ್ತ ಸುರಿಸಿ ದೇಶ ಪ್ರೇಮ ಮೆರೆಯಬೇಕಾದ ಅನಿವಾರ್ಯತೆ ನಂಮ ಮುಂದಿರುವ ವ್ಯಥೆ..! ರಕ್ತ ಕುದಿಯುತ್ತಿರುವಾಗ ಅದನ್ನು ತಡೆಯದೇ ನಂಮವರ ನೋವಿಗೆ ಮದ್ದಾಗಿ ಕೊಂಚ ಹರಿಸಲೇಬೇಕು.. ನೇತಾಜಿಯ ತರಹ.. ಚೆನ್ನಂಮನ ತರಹ.. --- ರನ್ನ ಕಂದ, ರನ್ನ ಮುಧೋಳ

ಒಂದರೊಳಗೊಂದೊಂದು..

Image
ನಾಲ್ಕು ಬಾಹು... ನಾನು,ನೀನು ಆನು,ತಾನು... ಎಂಬೀ ಹೆಸರಿನ ಆಯತವಷ್ಟೇ.. ಬದುಕು ಎಂದು ನಂಬಿಕೊಂಡು ಬದುಕುತ್ತಿದ್ದೆ... ಆವರಿಸಿತಾಗೊಂದು ಪರಿಧಿ.. ಇದಕಿಂತಲೂ ಮೇಲು.. ಬೇರೇನಿದ್ದರೂ ಎಲ್ಲ ಒಂದೇ ಎಂಬಂತೆ ಶೂನ್ಯ.. ಎಲ್ಲರೊಳಗೊಂದಾಗಿ ಪರಿಧಿಯಾಗುವುದೇ ಮನುಜ ಮತ... ಎಂಬ ಸತ್ಯ ಕಕ್ಕಿತು ಆ ವೃತ್ತ.. ಮೌನ ಸಂವಾದತ್ತ.. ನಿರ್ಲಿಪ್ತತೆಗೂ ಮುನ್ನ ಈ ಪರಿಧಿಯ ಮತ್ತೊಂದು ಪರಿಧಿ ನುಂಗಿತು.. ಅದೋ ವಿಶ್ವ ಪಥ... ನಾಕುತಂತಿಯ ದನಿ ನಾದಮಯ... ನಾಲ್ಕಕ್ಕೆ ಮೂಲ ಒಂದು... ಒಂದರಳೊಗೊಂದೊಂದು... --- ರನ್ನ ಕಂದ ( ಸಚಿನ್ ಕುಮಾರ ಬ.ಹಿರೇಮಠ),ರನ್ನ ಮುಧೋಳ