ಇರುಳೆಲ್ಲ ವಟಗುಟ್ಟಿದರೂ...ಮಂಡೂಕ ಲಹರಿ..

--- ರನ್ನ ಕಂದ (ಸಚಿನ್ ಕುಮಾರ ಬ.ಹಿರೇಮಠ)

ಇರುಳೆಲ್ಲ ವಟಗುಟ್ಟಿದರೂ
ನನ್ನ ಬವಣೆ ತೀರಲಿಲ್ಲ...
ಎಲ್ಲಿಯೋ ಹುದುಗಿ ಬಚ್ಚಿಟ್ಟು ಕೊಂಡರೂ
ಬದುಕ ದಾರಿ ತೋರಲಿಲ್ಲ...

ನಿನ್ನೊಳಗೊಂದು ಮಿಂಚು ನಿನಗೆ ಕಂಡಿತ್ತು
ಜಗವ ತೊಳೆವ ಹುಚ್ಚು ಹಿಡಿದಿತ್ತು..
ಅದೆಂಥ ಧ್ಯಾನವದು ಬೋಧಿ ವೃಕ್ಷದ ಕೆಳಗೆ
ನಾನೆಂತೂ ಅರಿಯೇ ಈ ಕಲ್ಲು ಪೊಟರೆಯೊಳಗೆ

ನೀ ನಕ್ಕ ನಗೆಯೆಲ್ಲವುಗಳಲಿ ಅವಿತಿತ್ತು
ಆತ್ಮ ಸಾಕ್ಷಿಯ ಜ್ಯೋತಿ
ನೀ ಇಟ್ಟ ಹೆಜ್ಜೆಗಳಡಿಯಲ್ಲಿ ಜನಿಸಿತ್ತು
ಆತ್ಮ ಜ್ಞಾನದ ಪ್ರೀತಿ

ನಿನ್ನ ಹೆಗಲೇರಿ ದಿಟ್ಟಿಸುತಿಹೆ
ನೋಡಲಾಗುತ್ತಿಲ್ಲ ಆ ದಿವ್ಯ ಪ್ರಭೆ
ಬಂಧಗಳ ಕಡಿದು ಬದುಕ ಪ್ರೀತಿಸುವ ಬಗೆಯ
ಕಲಿಸಿದೆ ಗೆಲ್ಲುವ ಪರಿ ಸಾಧಿಸದೇ ಹಗೆಯ..

ನಿನ್ನಂತೆ ಎಲ್ಲವನೂ ಮೀರಿ ಬಾಳುವಾಸೆ..
ಬದುಕೆಂದರೆ ಆಸೆ-ನಿರಾಸೆ..
ಹೆಗಲ ಮೇಲೆ ಜಿಗಿದು ಕೂರುವ ಬದಲು..
ಸೇರಬಾರದಿತ್ತೇ ನಿನ್ನ ಪರಿಶುದ್ಧ ಎದೆಯ ಕಡಲು?

(ಅವಧಿ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆ..29/09/2016)

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....