ನವ ಕರ್ನಾಟಕ ಪ್ರಕಾಶನ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ....
ನಾನು ಪ್ರತಿ ಸಲ ವಿಜಯಪುರಕ್ಕೆ ಹೋದಾಗ ಗಾಂಧೀ ವೃತ್ತದ ಮುಂದಿನ ರಸ್ತೆಯಲ್ಲಿನ ನಗರ ಸಭೆ ಕಟ್ಟಡದ ಪಕ್ಕದಲ್ಲಿ ತಪ್ಪದೇ ಕಣ್ಣು ಹಾಯಿಸುತ್ತೇನೆ. ಅಲ್ಲಿ ಈಗ ಮಾಸ್ಟರ್ ಪ್ಲ್ಯಾನ್ ಬಂದು ಎಲ್ಲ ಬದಲಾಗಿದೆ. ಮೊದಲು ಅಲ್ಲಿ 'ನವಕರ್ನಾಟಕ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ' ಎಂಬ ಖಾಯಂ ಶೆಡ್ಡೊಂದು ಸದಾ ಕಾಣ ಸಿಗುತ್ತಿತ್ತು. ಅದನ್ನು ದೂರದಿಂದಲೇ ಕಂಡಾಗ ನನ್ನ ಬಾಲ್ಯದ ಕೆಲ ಮಧುರ ನೆನಪುಗಳಿಗೆ ರೆಕ್ಕೆ ಬಂದಂತಾಗಿ ನೆನಪಿನಂಗಳದಲ್ಲಿ ಹಾರಾಡಿ ಕಣ್ಣು ತೋಯಿಸುತ್ತಿದ್ದವು.
1998 ರ ಇಸವಿ. ಆಗ ನಾನು ಒಂಭತ್ತನೆಯ ತರಗತಿ ಓದುತ್ತಿದ್ದೆ. ನನಗೆ ನಂಮ ಕನ್ನಡ ಮೇಷ್ಟ್ರು ಶ್ರೀ ಜಿ.ಕೆ.ಪಾಟೀಲ್ ಅಂದ್ರೆ ಪಂಚ ಪ್ರಾಣ. ಕಾರಣ ಅವರು ಕನ್ನಡವನ್ನು ಕೇವಲ ಕಲಿಸುತ್ತಿರಲಿಲ್ಲ.. ಕನ್ನಡ ಭಾಷೆಯ ರಸಾನುಭಾವಗೈಯ್ಯುತ್ತಿದ್ದರು. ರನ್ನನ 'ಗದಾಯುದ್ಧ' ದಲ್ಲಿನ 'ಕುರುಕುಲಾರ್ಕುನುಮರ್ಕನುಮಸ್ತಮೆಯ್ದಿದರ್' ಎಂಬ ಕಾವ್ಯ ಭಾಗವನ್ನು ವಿವರಿಸುವಾಗಲಂತೂ ಅವರು ಮಗುವಿನಂತೆ ಅತ್ತಿದ್ದು, ಆ ಕಾವ್ಯದಲ್ಲಿ ಸುಯೋಧನನ ದುರಂತ ಅಂತ್ಯವನ್ನು ತಿಳಿದು ನಾವೂ ಅತ್ತಿದ್ದು ಮರೆಯಲಾಗದ್ದು. ಹೀಗೆ ಸರಾಗವಾಗಿ ಹಳಗನ್ನಡವನ್ನು ನಿರರ್ಗಳವಾಗಿ ಓದುತ್ತಿದ್ದ ಅವರ ಭಾಷಾ ಪ್ರೌಢಿಮೆಯ ಬಗ್ಗೆ ಹೇಳತೀರದು. ಹೀಗೆ ಭಾಷೆಯ ಬಗೆಗೆ ಹೇಗೆ ಪ್ರೀತಿ ಬೆಳೆಸಿಕೊಳ್ಳಬೇಕೆಂದು ಅವರಲ್ಲಿ ಕೇಳಿದಾಗ ಅವರು ಹೇಳಿದ್ದ ಮಾತು ಒಂದೇ.
"ಕನ್ನಡ ಪುಸ್ತಕಗಳನ್ನು ಕೊಂಡು ಓದು.. ಕೊಳ್ಳಲಾಗದಿದ್ದರೆ ಕದ್ದಾದರೂ ಓದು"
ಅವರ ಆ ಮಾತು ನನ್ನ ಬಡತನ ಪರಿಸ್ಥಿತಿಗೆ ತಕ್ಕುದಾಗಿತ್ತು. ಮನೆಯಲ್ಲಿ ಬರೀ 2 ರೂಪಾಯಿ ಮಾತ್ರ ಪಾಕೆಟ್ ಮನಿ ಸಿಗುತ್ತಿತ್ತು. ಕನ್ನಡದ ಪುಸ್ತಕಗಳನ್ನು ಕೊಂಡು ಓದುವುದು ನನಗೆ ಸಾಧ್ಯವಾಗದ ಮಾತಾಗಿತ್ತು. ಹೀಗಿರಬೇಕಾದರೆ ನನಗೆ ಆಶಾಕಿರಣ ಎಂಬಂತೆ ಕಂಡದ್ದು ನನ್ನ ಗೆಳೆಯ ಪರಮಾನಂದ.. ಅವನ ಮನೆ ಪರಿಸ್ಥಿತಿಯು ನನಗಿಂತ ಏನೂ ಭಿನ್ನವಾಗಿರಲಿಲ್ಲ..ಅವನದ್ದು ಹಾಸುವಂಗಿರಲಿಲ್ಲ.. ನನ್ನದು ಹೊದಿಯುವಂಗಿರಲಿಲ್ಲ.. ಅವನ ಜತೆ ಒಂಮೆ ಈ ಬಗ್ಗೆ ಮಾತಾಡಿದೆ. ನಮಗೆ ಸಿಗುತ್ತಿದ್ದ ಪಾಕೆಟ್ ಮನಿಯನ್ನು ಉಳಿಸಿ ತಿಂಗಳಿಗೊಂದಾದರೂ ಪುಸ್ತಕ ಕೊಒಡುಕೊಳ್ಳುವಂತೆ ಮಾತಾಯಿತು.
ಪಾಕೆಟ್ ಮನಿ ಉಳಿಸಿ ಪುಸ್ತಕ ಕೊಳ್ಳುವ ಉಪಾಯ ವಿಫಲವಾಯಿತು.. ಆಗ ಕಂಮಿಯೆಂದರೂ 50/- ರೂಪಾಯಿಯ ಪುಸ್ತಕಗಳಿಗೆ ವರ್ಷಗಟ್ಟಲೇ ಕಾಯುವಂತಾಯಿತು. ಮುಂದೆ ಹೇಗೆ ಎಂದು ಪರಮಾನಂದನಿಗೆ ಕೇಳಿದಾಗ ಆತ ನಂಮ ಮೇಷ್ಟ್ರು ಹೇಳಿದ ಮಾತನ್ನೇ ಹೇಳಿದ.
"ಕನ್ನಡ ಪುಸ್ತಕಗಳನ್ನು ಕೊಂಡು ಓದು..ಕೊಳ್ಳಲಾಗದಿದ್ದರೆ ಕದ್ದಾದರೂ ಓದು"
ಆಗ ನಮಗೆ ಕಂಡದ್ದೇ 'ನವ ಕರ್ನಾಟಕ ಪ್ರಕಾಶನ ಪುಸ್ತಕ ಪ್ರದರ್ಶನ ಹಾಗೂ ಮಾರಾಟ' ಎಂಬ ಶೆಡ್ಡು. ನಂಮ ಪುಸ್ಕಕ ಕದಿತುವ ಕಾರ್ಯಕ್ರಮದ ರೂವಾರಿಯಾದ ಪರಮಾನಂದ ಮೊದಲು ತಾನು ಕದ್ದು ಮುಂದೆ ನನಗೆ ಅವನ ಕೈಚಳಕವನ್ನು ಕಲಿಸಿದ.. 'ಕಲಿಯುವತನಕ ಕೋಟಿ ವಿದ್ಯೆ ; ಕಲಿತ ಮೇಲೆ ಕೋತಿ ವಿದ್ಯೆ' ಎಂಬಂತೆ ಮುಂದೆಲ್ಲ ಸರಾಗವಾಯಿತು. ನಂಮ ಕಳ್ಳತನದ ರೂಪುರೇಷೆ ಹೀಗಿತ್ತು.
ಮೊದಲು ಸೀದಾ ಸಾದಾ ಹುಡುಗರಂತೆ ಮಳಿಗೆಯನ್ನು ಪ್ರವೇಶಿಸುವುದು. ಹೀಗೆ ಪ್ರವೇಶಿಸುವ ಮೊದಲು ನಂಮ ಬಳಿ ಕನಿಷ್ಟ 6-10 ರೂಪಾಯಿಗಳನ್ನು ಮೊದಲೇ ಇಟ್ಟುಕೊಂಡಿರುವುದು. ಅಂಗಡಿ ಮಾಲೀಕ ಮರೆಯಾಗುವವರೆಗೆ ಕೆಲವು ಪುಸ್ತಕಗಳನ್ನು ಪರಿಶೀಲಿಸಿದಂತೆ ನಟಿಸುವುದು. ಮುಂದೆ ನಮಗೆ ಇಷ್ಟವಾಗುವ ಪುಸ್ತಕಗಳನ್ನು ನಂಮ ಹೊಟ್ಟೆ ಮತ್ತು ಸೊಂಟದ ಅರ್ಧಕ್ಕೆ ಇಳಿಸಿ ಮುಂದೆ ಅಂಗಿಯನ್ನು ಇಳಿ ಬಿಟ್ಟು ಎಲ್ಲಿಯೂ ಉಬ್ಬಿ ಅನುಮಾನ ಬಾರದಂತೆ ಸೆಟೆದು ಒಂದು 6 ರಿಂದ 10 ರೂಪಾಯಿಯೊಳಗಿನ ಪುಸ್ತಕವನ್ನು ಕೊಂಡು ಮಳಿಗೆಯಿಂದ ಪಾರಾಗುತ್ತಿದ್ದೆವು. ಹೀಗೆ ವಾರಕ್ಕೊಂಮೆ ನಂಮ ಕಾಯಕ ನಡೆಯುತ್ತಿತ್ತು. ಕೆಲವೊಂದು ಸಲ ಪಾಕೆಟ್ ಮನಿ ಸಿಗದೇ ಬಹಳ ದಿನಗಳ ಮೇಲೆ ಹೋಆದಾಗ ಪಾಪ ಅಂಗಡಿಯ ಮಾಲೀಕ(ಶರಣು ಅಣ್ಣ..) "ಯಾಕ್ರೋ ಭಾಳ್ ದಿನಾ ಆತು.. ಈ ಕಡೆ ಬಂದೇ ಇಲ್ಲ..?" ಅಂತನ್ನುತ್ತಿದ್ದ..
ಹೀಗೆ ಸುಮಾರು 20-25 ಪುಸ್ತಕಗಳನ್ನು ಕದ್ದಿದ್ದಾಯ್ತು. ಅವನ್ನು ನಂಮ ಮನೆಯಲ್ಲಿ ಓರಣವಾಗಿ ಜೋಡಿಸಿಟ್ಟು ಒಂದು ಲೈಬ್ರರಿ ಥರಾ ಮಾಡಿದೆವು. ಅದಕ್ಕೆ 'ಎಸ್.ಪಿ ಲೈಬ್ರರಿ' ಅಂತ(ಎಸ್- ಸಚಿನ್ ಕುಮಾರ, ಪಿ-ಪರಮಾನಂದ) ಹೆಸರಿಟ್ಟೆವು. ಬೈಸಿಕಲ್ ಟ್ಯೂಬ್ ನ ತುಂಡೊಂದನ್ನ ಬ್ಲೇಡ್ ನಿಂದ ಕತ್ತರಿಸಿ ಎಸ್.ಪಿ ಲೈಬ್ರರಿ ಅಂತ ಸ್ಪೆಲ್ಲಿಂಗ್ಸ್ ಕಟ್ ಮಾಡಿ ಅದನ್ನೊಂದು ಮುರಿದ ಸ್ಟ್ಯಾಂಪಿಗೆ ಅಂಟಿಸಿ ಸೀಲ್ ಥರ ಮಾಡಿದ್ದೆವು.
ಮುಂದೆ ಈ ನಂಮ ಮಹಾನ್ ಘನ ಕಾರ್ಯ ನಂಮ ತರಗತಿ ಶಿಕ್ಷಕಿಯಾಗಿದ್ದ ಶ್ರೀಮತಿ ವ್ಹಿ.ಎಸ್.ಹಂದಿಗೋಳ ಅವರಿಗೆ ಗೊತ್ತಾಯಿತು. ಆವಾಗಿನಿಂದ ಈ ಪುಸ್ತಕ ಕದಿಯೋ ಕೆಲಸ ಬಂದ್ ಆಯ್ತು.. ಕದ್ದು ಓದಿ ಅಂದದ್ದು ಕಳ್ಳತನ ಮಾಡಿ ಓದಿ ಅಂತ ಅಲ್ಲ ಎನ್ನುವ ಸತ್ಯ ಅರಿವಾಗುವ ಹೊತ್ತಿಗೆ ನಮಗೆ ಸರ್ಕಾರಿ ನೌಕರಿ ಸಿಕ್ಕಿತ್ತು.
ವಿಜಯಪುರದಲ್ಲಿ ಆ ಜಾಗೆಯಲ್ಲಿ ಈಗ ಆ ಶೆಡ್ಡೂ ಇಲ್ಲ... ಆದರೆ ಯಾವುದೇ ಪುಸ್ತಕ ಮಳಿಗೆ ಕಂಡಾಗ ನಮಗೆ ಆ ದಿನಗಳ ನೆನಪುಗಳು ಪುಂಖಾನುಪುಂಖವಾಗಿ ಬರುತ್ತವೆ...
---- ಸಚಿನ್ ಕುಮಾರ ಬ.ಹಿರೇಮಠ


Comments