Posts

English

hsilgnE

ಬೆಟ್ಟ

ದಿವ್ಯ ಮೌನದಿ ಧೇನಿಸುತ್ತಿತ್ತು ಬೆಟ್ಟ ಅಂಬೋಧಗಳ ಎದೆಗೆ ತಾಗಿಸಿಕೊಂಡು ಸುಳಿಸುಳಿವ ತಿಳಿಗಾಳಿಯ ಉಸಿರಾಡುತ್ತ ಸುತ್ತಮುತ್ತಿನದಕೆಲ್ಲ ಏಕಾಗ್ರಚಿತ್ತ ಅಂತರಂಗದೊಳಗೆ ಅವಿತ ಬೇಗೆಯೊಳಗೆ ಜಗವ ಸುಡುವ ಜಂಘಾಬಲ ಬಹಿರಂಗದೊಳಗೆಲ್ಲ ವಿಶ್ರಾಂತ ಮನಸ್ಥಿತಿಯಂತಹ ವಿಹಂಗಮ ಆಡುಂಬೋಲ ಬೆಟ್ಟವೊಂದು ನಿಶ್ಚಿಂತೆಯ ಪ್ರತಿಮೆ ಕೊರೆದರೂ ಸಹ ಮೆರೆವ ಸಂಭಾವಿತ ಅಂತಾಗಬೇಕು ಮನ ಎರಗುವ ಉಲ್ಕೆಗಳ ಕರಗಿಸಿಬಿಡಬೇಕು ನೋವು ನಲಿವುಗಳ ಜೋಡಿಸಿಡಬೇಕು ಒಮ್ಮೊಮ್ಮೆ ಸುರಂಗದಿ ಹಾದಿ ತೋರಿಸಬೇಕು.. ಬೆಟ್ಟ ಮೌನ ಮುರಿಯಲ್ಲ.. ಚಿತ್ತ ಬಿಟ್ಟು ಮುಂದುವರೆಯಲ್ಲ.. ---ರನ್ನ ಕಂದ

ಹೆಜ್ಜೆಗಳಳಿಯದೇ ಇರಲಿ

ಎದುರಿಗೆ ಎದುರಾಗಿವೆ ದಾರಿಗಳು ಹಲವು| ಗರಿಕೆ ಬೆಳೆಯದೇ ದಾರಿ ತೋರಿವೆ ಹೆಜ್ಜೆಗಳು ಕೆಲವು| ನಡೆಯಬೇಕಿದೆ ಹುಡುಕಬೇಕಿದೆ ನಾವು ಕೈತಂದ ಕಾರ್ಯಗಳ| ಹುಟ್ಟಿ ಸಾಯುವ ಮಧ್ಯೆ ಕೆದಕಬೇಕಿದೆ ನೋವು ನಲಿವಿಂದ ಧೈರ್ಯಗಳ| ಇರಲಿ ನಿಸರ್ಗ ಸಗ್ಗಕೆ ನಮ್ಮ ನಿಮ್ಮೆಲ್ಲರ ವಂದನೆ| ಬರಲಿ ಸುಗ್ಗಿಯಾಗಿ ಸ್ನೇಹವಿಂದು ಪ್ರೇಮವಾಗಲಿ ಈಗ ಸ್ಪಂದನೆ| ದಾರಿಗಳ ನಡುವೆ ಸಿಕ್ಕ ಹೆಜ್ಜೆಗಳಳಿಯದೇ ಇರಲಿ| ಮನಸುಗಳ ಒಳಗೆ ನಕ್ಕ ನಗೆಗಳು ನಳನಳಿಸುತಿರಲಿ| --- ರನ್ನ ಕಂದ

ಆಶಯ

ನೆಲದ ತವಕ ಸಸಿಗೆ ನೆವಕ ರವಿಯ ಬೆಳಕು ಹೃದಯ ಸ್ಪರ್ಶ ಹೊಸದೊನ್ದು ಬದುಕು.. ಎದೆಯ ಗುಡಿಯಲಿ ತಮದ ಜಾಡು ಅರಿವ ಬೆಳಕಿನ ಕೋಲು ಪುನಃ ತಮದ ಸೋಲು ತನುವ ಪಣತಿಗೆ ಒಲುಮೆ ತೈಲವ ತುಮ್ಬಿ ಅರಿವ ಕಿಡಿ ಮುಡಿಸಬೇಕು ಬದುಕೇ ಹೊಸ ಬೆಳಕು ಅದು ಜಗವ ಬೆಳಗಬೇಕು.. --ಸಚಿನ್ ಕುಮಾರ ಬ.ಹಿರೇಮಠ(ರನ್ನ ಕಂದ)

ಬದುಕಿಗೆ ಅವಳನು ಆಹ್ವಾನಿಸಿರುವೆ...

ನಾ ಎದುರಾದಾಗಲೆಲ್ಲ ಅವಳ ಕೊರಳ ದನಿಗೆ ಬರಗಾಲ ಮಾತೆಲ್ಲ ಮೌನದಲಿ ಸೇರಿ ಮೌನವೂ ಒಂದು ಸಿಹಿಗಾಲ ಅವಳೆದುರಾದಾಗಲೂ ನಾ ನಿರ್ಲಿಪ್ತ ಕಣ್ಣುಗಳ ನಡುವೆ ನಡೆದು ಹೋಗುವುದು ಭಾವಗಳ ವ್ಯವಹಾರ ಅವಳು ದೂರದಿಂದಲೇ ದೂರುತ್ತಾಳೆ ಮಾತಾಗದ ಮೌನವನು ನಾನದನು ಮನ್ನಿಸುತಲೇ ಮಾತು ಮರೆಯುತ್ತೇನೆ ಬದುಕಿಗೆ ಅವಳನು ಆಹ್ವಾನಿಸಿರುವೆ ಒಲುಮೆಯನು ಇಂಚಿಂಚು ಹಂಚಿಕೊಳಲು ಮೌನದಲಿ ಬೆರೆತ ಮಾತುಗಳ ಬಿಚ್ಚಿಕೊಡಲು ಹರೆಯದ ಹಾದಿಯ ನಡುವೆ ಮರೆಯದೇ ಅವಳ ದಾರಿ ಕಾಯುತ್ತಿದ್ದೇನೆ ಮತ್ತೇ ಮೌನ ಕವಿಯದಿರಲೆಂದು ಮಾತು ಮೌನ ಮುರಿಯಲೆಂದು.. ---ರನ್ನ ಕಂದ

ಧರ್ಮೋ ರಕ್ಷತೀ...

ಧರ್ಮ ಎಂದಾಗ ನಗು ಈಗೀಗ ಧರ್ಮೋ ರಕ್ಷತಿ ರಕ್ಷಿತಃ ಎಲ್ಲಿ ಯಾರನು ರಕ್ಷಿಸುತಿದೆ ಧರ್ಮ? ಯಾರು ಮಾಡಿದ ಕರ್ಮ..? ಕೆಟ್ಟತನದ ಜತೆ ಆತ್ಮದ ಹೋರಾಟಕ್ಕೆ ಜಿಹಾದ್ ಎಂದರು ಪೈಗಂಬರ್ ಸಲ್ಲದ ಅರ್ಥಗಳ ಹಡೆದು ಧರ್ಮವನೆ ಒಡೆದು ಸಾವುಗಳು ಅಪ್ಪುತಿವೆ ಕೊಳಕುಗಳ ಎರೆದು ಮಜ್ಜನ ಗೈವವರ ನಡುವೆ ಸಜ್ಜನರು ಹೇಗೆ ಬದುಕಿಯಾರು? ಎಂಜಲುಗಳ ಮೇಲೆ ಉರುಳಾಡಿ ಧರ್ಮೋ ರಕ್ಷತಿ ಎನ್ನುವವರು ಸಿಡಿಬಾಂಬುಗಳ ಸಿಡಿಸಿ ಕಾಫಿರರನ್ನು ಅಳಿಸಿ ಧರ್ಮ ಕಟ್ಟಲಾರಿರಿ ಎದೆಯ ಗೂಡಲಿ ಬೀಡು ಬಿಟ್ಟ ಮಾನವತೆಯೇ ಧರ್ಮ ; ಅದ ಮುಟ್ಟಲಾರಿರಿ ಸಹ ನಿಮ್ಮ ತುಪಾಕಿಗಳು, ಮಷಿನು ಗನ್ನುಗಳಿಗೆ ಯಾವ ಧರ್ಮವಿದೆ? ಎದೆಯ ಬಗೆದು ರಕ್ತ ಕುಡಿವ ಧರ್ಮವಿದೆಯೇ? ನೀವು ಅವರ ದೇಹಗಳ ಕೊಲ್ಲಬಲ್ಲಿರಿ ದೇಶ ಪ್ರೇಮವ ಕೊಲ್ಲಲಾರಿರಿ.. ನಿಮ್ಮ ಮೊಂಡು ವಾದಗಳಿಗೆ ಚೂಪಾದ ಕತ್ತಿಯೊಂದು ಕಾಯುತ್ತಲಿದೆ.. ನಿಮ್ಮ ಅನಿಷ್ಟ ಧರ್ಮದ ಅಂತ್ಯಕ್ಕಾಗಿ... --- ರನ್ನ ಕಂದ(ಸಚಿನ್ ಕುಮಾರ ಬ.ಹಿರೇಮಠ)