ಹುಡುಕಬೇಕಿದೆ....
ಸೂಕ್ಷ್ಮದರ್ಶಕದಲ್ಲಿ
ಸಮಾಜವೊಂದು
ಸವಿಸ್ತಾರವಾಗಿ ತೋರುತ್ತಿದೆ...
ಹಸಿರು,ನೀರು,ಗಾಳಿ ಘಮಲು..
ನಡುವೆ ವಿಷದ ಹೂಂಕರಿಕೆ,ಕೊಚ್ಚೆ,ಬರೀ ಅಮಲು..
ಗೂಗಲಿನೋಪಾದಿಯಲಿ ತಲೆ ಉಳ್ಳವರ ನಡುವೆ
ಖಾಲಿ ಮನಸುಗಳು ಹಲವು...
ಎದೆಯ ಬಸಿದು ಬದುಕ ನೀಡುವವರ ಜತೆಗೆ
ಕಾಂಕ್ರೀಟಿನ ಎದೆಯುಳ್ಳವರ ತೊರೆದ ಒಲವು..
ನಿಸ್ತೇಜ ಬಾನಿನಲ್ಲಿ ಸತ್ತು ಬಿದ್ದ ತಾರೆಗಳ ರೀತಿ
ಮನದ ಅಂಗಳದಲ್ಲಿ ದಿಕ್ಕಾಪಾಲಾಗಿದೆ ನೀತಿ...
ಮಹಲುಗಳಲಿ ಕಲ್ಲು ಹೊತ್ತವರ ಬೆವರು
ಇನ್ನೂ ಕಾಣಸಿಗುತ್ತದೆ
ಆಸೆ ಪಟ್ಟಾಗ ಬರೀ ಹತಾಶೆಯ ಉಸಿರು...
ಇನ್ನಷ್ಟು ಹಿಗ್ಗಿಸಿದಾಗ,
ಸತ್ಯಗಳ ಕಂತೆಯ ಹೊದ್ದ ಸುಳ್ಳಿನ ಹೊದಿಕೆ
ನಿಚ್ಚಳವಾಗುವುದು ಸತ್ಯಮೇವ ಜಯತೇ...
ಆಗಾಗ ನಗುತ್ತಾರೆ ಬುದ್ಧ ಬಸವ ಗಾಂಧೀ ಅಂಬೇಡ್ಕರ್
ನಗೆಯ ಕಾರಣ ಕಾಣಿಸುವುದಿಲ್ಲ..
ಯಾವುದೇ ಮಸೂರ ಹುಡುಕಿ...
ಸಿಗುವುದಿಲ್ಲ...
--- ರನ್ನ ಕಂದ
Comments