ಭಾವ ಬಸಿರಿನ ಕೂಸು...

ಇದು ಬರಿ ಕವಿತೆಯಷ್ಟೇ ಅಲ್ಲ..ಭಾವ ಬಸಿರಿನ ಕೂಸು
ನನಸಿಗೆ ಬೆಸೆದುಕೊಂಡಿರುವ ಬೆಚ್ನೆಯ ಕನಸು
ಗವ್ವನೇ ಹೊದ್ದುಕೊಂಡ ಕತ್ತಲೆಯ ಸೆರಗನ್ನು
ಹಿಡಿದೆಳೆದು ಅಂತರ್ಯವನ್ನು ನಗ್ನಗೊಳಿಸಿದ  ಜ್ಯೋತಿ ನೀನು
ಇಗೋ ನಿನ್ನಲಿ ನನ್ದೊಂದು ನಿವೇದನೆ..

ಕಣ್ಣು ತೆರೆದರೆ ಸಾಕು ತೆರೆದುಕೊಳ್ಳುತ್ತದೆ ನಿನ್ನದೇ
ಸಿಟ್ಟು, ಸೆಳತ, ಸಲುಗೆ, ಸ್ನೇಹ, ನಗು ಒಲುಮೆ ತುಂಬಿದ ಚೆಲುವು
ಹಾಗೆಂದು ಕಣ್ಣು ಮುಚ್ಚಿಕೊಂಡರೂ ಪದೇ ಪದೇ
ನೆನಪಾಗುತ್ತೀಯ , ಇಳಿಯುತ್ತಿಲ್ಲ ನಿನ್ನ ಸ್ವಚ್ಛಂದದ ಮನಸಿನ ಏಕತಮ ಕಾವು

ತಣಿಸಿ ಒಲಿಸುವುದು ಸುರಿವ ಸೋನೆ ಮಳೆ
ನಲಿವುದು ಕ್ಷಣ ಕ್ಷಣಕೂ ಸೌಗಂಧ ಸೂಸಿ ಇಳೆ
ಅಂತೆಯೇ ಹುಡುಗಿ ನನ್ನೆದೆ ನೆನೆವುದು ನಿನ್ನ ನೆನೆವಾಗ
ಇಂಥ ರಮಣೀಯತೆ ಮುಂದೆ ತೃಣ ಮಾತ್ರ ಸಿರಿ ಭೋಗ

ಹೂವು ನೀಡಿ ಹೃದಯ ಒಪ್ಪಿಸುವುದೆಲ್ಲಾ ಹಳತು
ಪದಕೆ ಭಾವ ಬೆರೆಸಿ, ಬೆರೆಸು ಮೌನಕೆ ಮಾತು
ಇದೋ ನೆನಪಿರಲಿ ಈ ಕವಿತೆಯಲ್ಲಿನ ಕೊನೆಯ ಸಾಲು
ಯುಗಗಳಾಚೆಗೂ ಅಮರವೀ ಪ್ರೀತಿ ಇದಕುಂಟೇ ಸೋಲು..?
                   —ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಹೂಗಳು

ಒಂದು ಸಂಜೆಯ ಮಳೆಯ ನಡುವೆ...

ಬೆಂಕಿ

ಅಂಥ ಘಟನೆಗೆ ಇವರ ರಕ್ತ ಕುದಿಯುವುದಿಲ್ಲವೇ...?

ನಮ್ಮ ಕಥೆ

ಮುತ್ತು

ಮರದ ಸ್ವಗತ...