ನಾವೇಕೆ ಬುದ್ಧರಾಗುತ್ತಿಲ್ಲ...?

ಸುದೀರ್ಘವಾಗಿ ಸರಿ ಸುಮಾರು 20 ನಿಮಿಷ ಸಿದ್ಧಾರ್ಥನ ಜೀವನದಲ್ಲಿ  ಬಂದು ಹೋದ ರೋಗಿ, ವೃದ್ಧ, ಶವ, ಸಂನ್ಯಾಸಿಗಳು – ಆತನು ಬುದ್ಧನಾಗಲು ಹೇಗೆ ಕಾರಣೀಭೂತರಾದರೆಂಬುದನು ನನ್ನ ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆವಿವರಿಸಿ ಹೇಳಿದ್ದೆ. ಸ್ತಂಭೀಭೂತರಾಗಿ ಕಣ್ಣು ಪಿಳುಕಿಸದೇ, ತುಟಿ ಪಿಟಿಕ್ಕೆನ್ನದೇ ನನ್ನನ್ನೇ ಆಲಿಸುತ್ತಿದ್ದ ವಿದ್ಯಾರ್ಥಿಗಳ ಕುತೂಹಲವನ್ನು ಕಂಡು ನನ್ನ ಬಗ್ಗೆ ನಾನೇ ಹೆಮ್ಮೆ ಪಟ್ಟುಕೊಂಡೆ. ಎಂದಿನಂತಹ ಕಿರಿ ಕಿರಿ, ಕೆಳಗಿನ ತರಗತಿಯ ವಿದ್ಯಾರ್ಥಗಳ ಗದ್ದಲ ಯಾವುದರ ತೊಂದರೆಯಿಲ್ಲದೇ ನೀತಿ ಪಾಠವನ್ನು ಯಶಸ್ವಿಯಾಗಿ ಮುಗಿಸಿದೆ ಎಂದೆನ್ನುವಷ್ಟರಲ್ಲಿ ಒಬ್ಬ ವಿದ್ಯಾರ್ಥಿಯ ಕುತೂಹಲ ಸೀಳಿಕೊಂಡು ಬಂದ ಸಂಶಯ  ಪ್ರಶ್ನೆಯ ರೂಪದಲ್ಲಿ ಅನಿರ್ಭವಿಸಿತು.
     “ಸರ್..ಸಿದ್ಧಾರ್ಥನ ಜೀವನದಲ್ಲಿ ಕೇವಲ ಒಂದೇ ಒಂದು ಸಲ ಕಾಣಿಸಿಕೊಂಡ ರೋಗಿ, ವೃದ್ಧ, ಶವ, ಸಂನ್ಯಾಸಿಗಳು ನಮ್ಮ ಮುಂದೆ ಅದೆಷ್ಟೋ ಸಲ ಕಾಣಿಸಿಕೊಳ್ಳುತ್ತಾರೆ. ಆದರೆ ನಾವೇಕೆ ಬುದ್ಧರಾಗುತ್ತಿಲ್ಲ..?” ಈ ಪ್ರಶ್ನೆ ನಿಜಕ್ಕೂ ನನ್ನನ್ನು ಕಾಡತೊಡಗಿತು.
    “ನಾವೂ ಬುದ್ಧರಾಗಬಹುದು..ಆದರೆ ನಾವು ಮೊದಲು ಆತನಂತೆ ಆಸೆಯನ್ನು ತ್ಯಜಿಸಬೇಕು. ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು.” ಎಂಬುದಷ್ಟೇ ನನ್ನ ಉತ್ತೆರವಾಗಿತ್ತು.
 ”ಸರ್.. ಸಿದ್ಧಾರ್ಥನಿಗೆ ಆತನ ಪಟ್ಟಾಭಿಷೇಕವಾದ ಬಳಿಕ ಈ ರೋಗಿ, ವೃದ್ಧ, ಶವ, ಸಂನ್ಯಾಸಿಗಳು ನೋಡಲು ಸಿಕ್ಕರು..ಆದರೆ ನಾವು ಅನೇಕ ಸಲ ಿಂತವರನ್ನು ನೋಡಿದ್ದೇವೆ. ನಾವೂ ಬುದ್ಧನಂತಾಗಲು ಸರ್ವಸ್ವವನ್ನು ತ್ಯಜಿಸಬೇಕೆ?’ ಎಂಬುದು ಆ ವಿದ್ಯಾರ್ಥಿಯ ಮತ್ತೊಂದು ಪ್ರಶ್ನೆಯಾಗಿತ್ತು.
 ನಾನಂದೆ : “ನಮಗದರವಶ್ಯಕತೆಯಿಲ್ಲ ಮಗು..ಸಿದ್ಧಾರ್ಥ ಜ್ಞಾನೋದಯ ಹೊಂದಿ ಗೌತಮ ಬುದ್ಧನಾಗಿ ನಮಗೆ ತಾನು ಕಂಡುಕೊಂಡ ಜ್ಞಾನವನ್ನು, ಸತ್ಯವನ್ನು ಅರುಹಿದ್ದಾನೆ. ನಾವು ಆತನ ಮಾರ್ಗದಲ್ಲಿ ನಡೆದರೆ ಅಷ್ಟೇ ಸಾಕು.”
    ಬಹುಶಃ ಆತನಿಗೆ ನನ್ನ ಈ ಉತ್ತರದಿಂದ ತೃಪ್ತಿಯಾಗಲಿಲ್ಲವೆಂದೆನಿಸಿತು.
“ಅದ್ಹೇಗೆ ಸಾಧ್ಯ ಸರ್..?ಬುದ್ಧನ ಪ್ರಕಾರ ನಾವು ಆಸೆಯನ್ನು ತೊರೆಯಬೇಕು. ಏಕೆಂದರೆ ‘ಆಸೆಯೇ ದುಃಖಕ್ಕೆ ಮೂಲ ಕಾರಣ’. ಆದರೆ ಆಸೆಗಳಿಲ್ಲದೆ ನಮ್ಮ ಜೀವನ ನಡೆಸುವುದಾದರೂ ಹೇಗೆ.. ?Atleast ನಮ್ಮನ್ನು ನಂಬಿದವರ ಬಯಕೆಗಳನ್ನು ಈಡೇರಿಸಲು ನಾವು ಆಸೆಗಳನ್ನು ಹೊಂದುವುದು ಅತ್ಯವಶ್ಯಕ.  ಹಾಗಾಗಿ ಬುದ್ಧನ ಮಾರ್ಗದಲ್ಲಿ ನಡೆಯುವುದು ತುಸು ಕಷ್ಟ. ನಾವು ನಮ್ಮ ಆಸೆಗಳನ್ನು ಹತ್ತಿಕ್ಕಬಹುದು. ಆದರೆ ನಮ್ಮನ್ನು ನಂಬಿದವರ ಆಸೆಗಳನ್ನು ಹೇಗೆ ಹತ್ತಿಕ್ಕಲು ಸಾಧ್ಯ..? ನನಗೆ ಅಮ್ಮ – ಅಪ್ಪನನ್ನು ಒಂದು ಸಲ ಸುಕ್ಷೇತ್ರಗಳಿಗೆ ಕರೆದುಕೊಂಡು ಹೋಗುವಾಸೆ. ಇದರಿಂದ ಅವರಿಗೆ ತುಂಬಾ ಸಂತೋಷವಾಗುತ್ತದೆ. ಅದಲ್ಲದೇ ಈ ಸಲದ S.S.L.C ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವಾಸೆ. ಈ ಎಲ್ಲ ಆಸೆಗಳನ್ನು ತೊರೆದರೆ ನೀವು ನನ್ನ ಸುಮ್ಮನೆ ಬಿಡಲಾರಿರಿ. ಅಲ್ಲವಾ..?”
ನನಗೆ ಆತನ ಮನಸಿನ ತಳಮಳ ಅರ್ಥವಾಯಿತು. ಅದನ್ನು ಸ್ಪಷ್ಟಪಡಿಸಬೇಕೆನ್ನುವಷ್ಟರಲ್ಲಿ ಆತ ಮತ್ತೊಂದು ಪ್ರಶ್ನೆ ಕೇಳಿದ.
“ಸರ್..ಬುದ್ಧ ಹೇಳಿದಂತೆ ಸನ್ನಡತೆ, ಸತ್ ಚಿಂತನ, ಸತ್ಕಾರ್ಯ, ಸನ್ನುಡಿ, ಸದ್ಭಕ್ತಿ, ಸನ್ನಿರ್ಧಾರ, ಸದ್ಭಾವ, ಸದ್ಬುದ್ಧಿ ಇವೆಲ್ಲವೂ ಇಂದಿನ ಈ ಪರಿಸ್ಥಿತಿಯಲ್ಲಿ ಎಷ್ಟು ಸಮರ್ಪಕ? ಇವೆಲ್ಲವೂ ಭಯೋತ್ಪಾದಕರಿಗೆ, ಕೋಮು ಗಲಭೆಕೋರರಿಗೆ, ರಾಜಕಾರಣಿಗಳಿಗೆ, ಭ್ರಷ್ಟ ಅಧಿಕಾರಿಗಳಿಗೆ, ಮುಗ್ಧ ನಾಗರಿಕರಿಗೆ ಎಲ್ಲರಿಗೂ ಅವಶ್ಯವಿರುವಾಗ ಯಾರೂ ಏಕೆ ಇವನ್ನೆಲ್ಲ ಅನುಸರಿಸುತ್ತಿಲ್ಲ..? ಯಾಕೆ ಇವನ್ನೆಲ್ಲ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿಲ್ಲ..?
  ಆಗ ಬಹುಶಃ ನನ್ನಲ್ಲಿ ಕೊಂಚ ಖೇದವುಂಟಾಯಿತಾದರೂ ಸಾವರಿಸಿಕೊಂಡು ಮುಂದುವರೆದೆ.
 ”ನೋಡು..ಆಸೆಗಳು ಜೀವನದಲ್ಲಿ ಮುಖ್ಯ. ಆದರೆ ಅದರ ಹಿಂದಿನ ಉದ್ಧೇಶವೂ ಮುಖ್ಯ..ಬುದ್ಧ ತ್ಯಜಿಸಬೇಕೆಂದು ಹೇಳೀದ ಆಸೆಗಳೇ ಬೇರೆ. ಕೆಲವು ಆಸೆಗಳು ನಮ್ಮೊಳಿತಿಗೆ ಪೂರಕವಾಗಿರುತ್ತವೆ. ಅವನ್ನೆಲ್ಲ ತ್ಯಜಿಸಬೇಕೆಂದೇನಿಲ್ಲ.. ನೀನಿಟ್ಟುಕೊಂಡಿರುವ ಆಸೆಗಳಲ್ಲಿ ಕೆಲವು ಗುರಿಗಳೂ ಇವೆ. ಒಂದರ್ಥದಲ್ಲಿ ಗುರಿ, ಉದ್ಧೇಶ, ಆಸೆ, ಬಯಕೆ, ಹಂಬಲ ಇವೆಲ್ಲ ಬೇರೆ ಬೇರೆ.  ಇನ್ನು ನೀನು ಹೇಳೀದಂತೆ ಇಷ್ಟೆಲ್ಲಾ ತಿಳಿದುಕೊಂಡಿದ್ದರೂ, ಓದಿಕೊಂಡಿದ್ದರೂ ನಮ್ಮಲ್ಲಿ ಕೆಲವರು ಇವನ್ನೆಲ್ಲ ಅನುಸರಿಸುತ್ತಿಲ್ಲ. ನಿಜ..ಇದುವೇ ವಿಪರ್ಯಾಸ.. ಅದು ಸುತ್ತಮುತ್ತಲಿನ ವಾತಾವರಣದ ಪ್ರಭಾವವಿರಬೇಕು..ಅದರ ಬಗ್ಗೆ ನೀನು ಈಗ ತಲೆ ಕೆಡಿಸಿಕೊಳ್ಳಬೇಡ..ಇದರ ಬಗ್ಗೆ ಮುಂದೆ ಆಲೋಚಿಸುವಿಯಂತೆ..” ಎಂದ್ಹೇಳಿ ಆ ದಿನದ ತರಗತಿಗೆ ಕೊನೆ ಹಾಡಿದೆನಾದರೂ ಆ ಮುಗ್ಧ ಮನಸಿನ ಪ್ರಶ್ನೆಗಳಿಗೆ ನನ್ನಲ್ಲಿ ನಿಖರವಾದ ಉತ್ತರಗಳಿರಲಿಲ್ಲ..
 ’ಹೌದು..! ನಾವೇಕೆ ಬುದ್ಧರಾಗುತ್ತಿಲ್ಲ..?’ ಎಂದೆನ್ನುಕೊಳ್ಳುತ್ತಿರುವಾಗಲೇ ಯಾರೋ ಬರೆದ ಕವನ ನೆನಪಾಯಿತು.
                                                                           *** ಸಚಿನ್ ಕುಮಾರ ಬಿ.ಹಿರೇಮಠ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....