ಮನಸ್ಸಿನ ಭಾವನೆಗಳನ್ನು ಸಮಾಧಿ ಮಾಡುವ ಅಭ್ಯಾಸ ಮರೆತು ಹೋಗಿದೆ?

ಗೆಳತಿ,
    ಇದು ಅಂದೇ ಬರೆಯಬೇಕಿದ್ದ ಪತ್ರವೆಂದು ನಿನಗನ್ನಿಸಬಹುದು. ನನ್ನ ಅಭಿಪ್ರಾಯದಲ್ಲಿ ಇದು ಪತ್ರವಲ್ಲ. ನಿನ್ನ ಬಗೆಗಿನ ಭಾವನೆಗಳ ಚಂದದ ಮೆರವಣಿಗೆ ಇರುವ ಒಕ್ಕಣೆ. ನಿನ್ನೊಂದಿನ ಸವಿ ಸ್ನೇಹದ ಹೂವು ಪ್ರೀತಿಯ ಪರಿಮಳ ಬೀರಿದ ಪರಿಯನ್ನು ನೆನೆದಾಗೆಲ್ಲ ಮನಸ್ಸು ಉಲ್ಲಸಿತವಾಗುತ್ತದೆ.  ಆ ನಿನ್ನ ಸಿಹಿಮಾತು, ಬೆಳದಿಂಗಳಂತಹ ಹೂ ನಗೆ, ನಕ್ಷತ್ರಗಳೇನೋ ಎಂಬಂಥ ನೀಲಿ ನಯನಗಳು, ಆ ಹುಸಿ ಮುನಿಸು, ಎಲ್ಲವೂ ಈ ಎದೆಯ ಕೊಳದಲ್ಲಿ ಒಂದು ಬಗೆಯ ಕ್ಷೋಭೆಯನ್ನುಂಟುಮಾಡಿದ್ದು ಸುಳ್ಳಲ್ಲವೆಂಬುದು ಮಾತ್ರ ಸತ್ಯ. ಮೊದಮೊದಲು ಇದೆಲ್ಲ ವಯಸ್ಸಿನ ಆಕರ್ಷಣೆ ಎಂದೆನ್ನಿಸಿ ಬಂದ ಭಾವನೆಗಳನ್ನೆಲ್ಲ ಕೊಂದು ಹಾಕುತ್ತಿದ್ದೆ. ಆದರೆ ಬರಬರುತ್ತ ಆ ಭಾವನೆಗಳು ಮನಸ್ಸಿನಾಳದಲ್ಲಿ ಬೇರೂರು ಟಿಸಿಲೊಡೆದು ಹೆಮ್ಮರವಾದಾಗ ನಾನದನ್ನು ಸೈರಿಸಲಾರದವನಾದೆ. ಈ ಮನಸ್ಸೇ ಹಾಗೆ. ನಿನ್ನ ಮಾತುಗಳಿಗೆ ಕಿವಿಯಾಗಬೇಕು, ನಿನ್ನ ಸನಿಹ ಸವಿಯಬೇಕೆಂಬ ಮನಸ್ಸಿನ ಹಪಹಪಿಯನ್ನಿ ಮೀರಿ ನಡೆದೆ. ಹೀಗಾಗಿ ನನಗೆ ಮನಸ್ಸಿನ ಭಾವೆಗಳನ್ನು ಸಮಾಧಿನಮಾಡುವ ಅಭ್ಯಾಸ ಮೆರತು ಹೋಗಿತ್ತು. ಅದೊಂದು ದಿನ ನಿನ್ನ ಮುಂದೆಲ್ಲವನು ಹೇಳಿಕೊಂಡೆ. ಒಬ್ಬ ಸಾದಾ ಹುಡುಗನಾಗಿ, ನಿನ್ನನ್ನು ಬದುಕಿಗೆ ಕಟ್ಟಿಕೊಳ್ಳುವ ಸಾಹಸವನ್ನು ತುಂಬಾ ಬುದ್ಧಿವಂತೆಯಾದ ನೀನು ಹೇಗೆ ಒಪ್ಪಿಕೊಂಡೆ ಎಂಬುದನ್ನು ಕಂಡು ಈಗಲೂ ನನಗೆ ನಿನ್ನ ಮೇಲೆ ಆಶ್ಚರ್ಯವುಂಟಾಗುತ್ತಿದೆ.
                                         ಪ್ರೀತಿ ಎಂದರೆ ಹೀಗೆ..ಭವಿಷ್ಯವನ್ನು ಸಿಂಗರಿಸುವ ಭರದಲ್ಲಿ ವರ್ತಮಾನವನ್ನು ಕಡೆಗಣಿಸುತ್ತದೆ. ಬಹುಶಃ ನನ್ನ ಜೀವನದಲ್ಲಿಯೂ ಹೀಗೆ ಆಯಿತೇನೋ..? ನಿನ್ನ ಪ್ರೀತಿಯ ಪಡೆಯಬೇಕೆಂಬ ಹುಮ್ಮಸ್ಸಿನಲ್ಲಿ ನನ್ನ ಆವತ್ತಿನ ವರ್ತಮಾನವನ್ನು ನಾನು ಮರೆತುಬಿಟ್ಟೆ. ಅದರ ಫಲವೇ ಇಂದು ನಾನು ಅತಂತ್ರವಾಗಿ ನಿನ್ನ ಎದುರು ಅಪರಾಧಿಯಾಗಿ, ದ್ರೋಹಿಯಾಗಿ ನಿಂತಿದ್ದೇನೆ. ಪ್ರೀತಿ ತಾನೇ ತಾನಾಗಿ ಹುಟ್ಟುತ್ತೆ ಅಂತಾರೆ ನಿಜ.. ಆ ಪ್ರೀತಿ ನಿನ್ನಲ್ಲಿ ಮತ್ತೊಮ್ಮೆ ಹುಟ್ಟಬಹುದು. ನಿನ್ನ ಮಾನಸ ಪುಟದಿಂದ ನಾನು ಸಂಪೂರ್ಣವಾಗಿ ಮಾಸಿ ಹೋದಾಗ ಮಾತ್ರ ನಿನ್ನಲ್ಲಿ ಆ ಪ್ರೀತಿ ಇನ್ನೊಮ್ಮೆ ಜನಿಸಲು ಸಾಧ್ಯ. ನಿನ್ನ ಖುಷಿಗೆ ಒಂದಿಷ್ಟು ಖುಷಿ ಬೆರೆಸಲಾಗದಿರುವ, ನಿನ್ನ ಬದುಕಿಗೆ ಚೈತ್ರವಾಗದ ಈ ನಿರುದ್ಯೋಗಿಯನ್ನು ಪ್ರೀತಿಸಲು ನಿನಗೆ ಹಕ್ಕಿಲ್ಲ ಎಂಬುದು ನನ್ನ ವಾದ. ಪ್ರೀತಿಗೆ ಲಿಂಗ, ಜಾತಿ, ಭೇದ, ವೃತ್ತಿ, ವರ್ಣ, ವಯಸ್ಸು ಹೀಗೆ ಯಾವುದು ಸಂಬಂಧವಿಲ್ಲ, ಅವಶ್ಯವಿಲ್ಲ ಎನ್ನುವುದು ಲೋಕದ ರೂಢಿಮಾತು. ನಿನ್ನ ಸಂತೋಷವನ್ನು ನೀನು ಪೂರಾ ಅನುಭವಿಸಬೇಕು. ಅದು ಸೋರಿ ಹೋಗಬಾರದು. ನನ್ನ ಪ್ರೀತಿ ಕೇವಲ ನಿಮಿತ್ತವೆಂದು ಭಾವಿಸಿ ನಿನಗೊಪ್ಪುವ ಹುಡುಗನನ್ನು ಮದುವೆಯಾಗು. ಪ್ರೀತಿ ಬದುಕಿನ ಒಂದು ಭಾಗವಷ್ಟೆ.  ಮೂರು ಬಿಂದುಗಳನ್ನು ಸೇರಿಸಿ ತ್ರಿಕೋನ ಮಾಡುವಂಥ ಒಂದು ಅವಿಸ್ಮರಣೀಯ ರಚನೆಯೇ ಪ್ರೀತಿ. ನಿನ್ನನ್ನು ನಾನು ಈಗಲೂ ಪ್ರೀತಿಸುತ್ತೇನೆ. ಆದರೆ ಬದುಕನ್ನು ನಿನ್ನೊಂದಿಗೆ ಹಂಚಿಕೊಳ್ಳಲಾರೆ. ನಿನ್ನ ಕಾಯುವಿಕೆಗೆ ಅರ್ಥವಿಲ್ಲವೆಂಬುದನು ಈಗಲೇ ಸ್ಪಷ್ಟಪಡಿಸುತ್ತೇನೆ. ಸದ್ಯ ಬಡತನದ ಬೆಂಗಾಡಿನಲ್ಲಿ ಅಲೆಯುತ್ತಿರುವೆ. ಊರಿನಲ್ಲಿ ಯಾರ್ಯಾರೋ ಏನೇನೋ ಆಡಿಕೊಳ್ಳುತ್ತಿದ್ದಾರೆ.
           ಮನಸ್ಸಿನಾಳದಲ್ಲಿ ಒಂದು ನಿರೀಕ್ಷೆಯಿದೆ. ಒಂದುವಿಷಯ..! ನನ್ನಲ್ಲಿ ಈಗ ನಿನ್ನ ಬಗ್ಗೆ ಯಾವ ಭಾವನೆಗಳೂ ಇಲ್ಲ..
                                     ಇಂತಿ ನಿನ್ನ ದ್ರೋಹಿ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....