ಚಿಂತನ ಸೌರಭ : ದೇವರು

ನುಷ್ಯನ ನಿರಂತರ ಜೀವನದಲ್ಲಿ ಕೆಲುವು ವಿಚಾರಗಳು ಮಾನಸಿಕ ಸ್ಥಿರತೆಯನ್ನು ಕದಡುತ್ತವೆ. ದೇವರು, ಧರ್ಮ,ಪರದೈವ ಇಂಥ ವಿಚಾರಗಳಲ್ಲಿ ನಮ್ಮ ವಿವೆಕವನ್ನು ಓರೆಗಲ್ಲಿಗೆ ಹಚ್ಚಬೇಕಾಗಿದೆ. ಇವೆಲ್ಲ ಸ್ಥಾವರ ಭಾವಗಳು. ಹಾಗಾದರೆ ಕಲ್ಪನೆಗಳೆನ್ನಬಹುದು. ಅಂಟಿಕೊಂಡರೆ ಆಸ್ತಿಕನೆನ್ನಬಹುದು. ಅಟ್ಟಿದರೆ ನಾಸ್ತಿಕನೆನ್ನಬಹುದು.
    ದೇವರ ಅಸ್ತಿತ್ವ ಎಲ್ಲಿದೆ?ಹೇಗಿದೆ? ಅವನ ರೂಪ, ಬಣ್ಣ, ವಾಸನೆ, ವ್ಯಕ್ತಿತ್ವದ ಬಗ್ಗೆ ನಾನಾ ಚಿಂತಕರು, ದಾರ್ಶನಿಕರು ವಿವಿಧ ಸಿದ್ಧಾಂತಗಳನ್ನು ನಿರೂಪಿಸಿದ್ದಾರೆ. ಅವರವರ ಭಕುತಿಗೆ ಅವರವರ ಬಾವಕ್ಕೆ ಅವರಂತಿಹನು ಶಿವನು.

            ಸಿದ್ದಯ್ಯ ಪುರಾಣಿಕರ ಪ್ರಕಾರ ದೇವರ ಅಸ್ತಿತ್ವವೆಂದರೆ ಮೂಡದ ಹೂವಿನ ಕಂಪು. ನವಿಲಿನ ಹೊಟ್ಟೆಯೊಳಗಿನ ಮೊಟ್ಟೆ. ಗರಿಗಳ ಕಣ್ಣಿನ ಬಣ್ಣ.ಬೀಜದ ಮೊಳಕೆ. ಮಗುವಿನ ಮಂದಹಾಸ.ಬಂಜೆಯ ಸ್ವಪ್ನ, ಕರೆಯದ ಹಾಲು. ಕಡೆಯದ ಬೆಣ್ಣೆಯ ಸವಿಯಂತಿರುವನು. ಅಂದರೆ ದೇವರು ಅಮೂರ್ತವಾಗಿದ್ದಾನೆ.ಮೂರ್ತನಾದರೆ ಫಲಪ್ರದ ಚೇತೋಹಾರಿಯಾದುದು.
           ಸ್ವರ್ಗ ನರಕಗಳ ಕಲ್ಪನೆಯೂ ಕೂಡಾ ದೇವರ ಜೊತೆಗೆ ತಳುಕು ಹಾಕಿಕೊಂಡಿದೆ. ಸತ್ಕರ್ಮ ಸನ್ಮಾರ್ಗಕ್ಕೆ ಸ್ವರ್ಗ ಪ್ರಾಪ್ತಿಯಾದರೆ, ದುರಿತ್ಕರ್ಮಮಾಮಮಾರ್ಗಕ್ಕೆ ಹಾಕಿಕೊಂಡ ಸೋಪಾನಗಳೇ ಸ್ವರ್ಗ ಮತ್ತು ನರಕ. ನರಕದ ಭಯದಿಂದ ಸ್ವರ್ಗದ ಆಸೆಯಿಂದ ನಿತ್ಯ ಜೀವನದ ಜಂಜಾಟದಿಂದ ದೇವರು ನೆನಪಿಗೆ ಬರುತ್ತಾನೆ.
                   ಸ್ವರ್ಗ ನರಕ ಭಾವ ಪುಷ್ಟಿಗಳು. ಆಚಾರವೇ ಸ್ವರ್ಗ, ಅನಾಚಾರವೇ ನರಕ.ಸತ್ಯ ಮಿಥ್ಯದ ಕಣ್ಣು ಮುಚ್ಚಾಲೆ ಆಟ.ಬಸವಣ್ಣನವರ ದೇವರ ಪ್ರಜ್ಞೆ ಜಾಗತಿಕ ಸತ್ಯವಾದುದು. ಒಪ್ಪಿ ಅಪ್ಪಿಕೊಳ್ಳಬೇಕಾದ ವಿಚಾರಗಳು. ತಮ್ಮ ವಚನಗಳ ಮುಖೇನ ಅನನ್ಯ, ಅಗಮ್ಯ ವಿಚಾರಧಾರೆಗಳನ್ನು ಧಾರೆ ಎರೆದಿದ್ದಾರೆ. ಕಾಯಕ ಕೈಲಾಸವಾಗಬೇಕು. ಕೈಲಾಸದಲ್ಲಿಯೇ ಅವನಿರುವನು. ಕೈಲಾಸ ನಮ್ಮ ಕಾಯಕದಲ್ಲಿದೆ. ಅಂದಾಗ ದೇವರು ನಮ್ಮೊಳಗೆ ಇದ್ದಾನೆ.ಅವನನ್ನು ಎಲ್ಲಿಯೂ ಹುಡುಕಬೇಕಿಲ್ಲ.ಈ ಜಗತ್ತು ದೇವರ ಕಮ್ಮಟ.ನಿಷ್ಠೆಯಿಂದ ಕಾರ್ಯತತ್ಪರರಾಗಬೇಕು. ಈ ಜಗದಲ್ಲಿ ಯಾವುದು ಘನವಿಲ್ಲ. ನಿನ್ನ ನೀ ತಿಳಿ ದೇಹವೇ ದೇವಾಲಯ. ನಿನ್ನೊಳಗಿರುವ ಆತ್ಮ ದೇವರನ್ನು ತಿಳಿ. ಅರಿವೇ ಗುರು. ಗುರುವೇ ಹರ. ದೇವನೊಬ್ಬ ನಾಮ ಹಲವು. ಗಡಿಯಾರಗಳು ಸಾವಿರ , ಸಮಯ ಒಂದೇ.ಸಹಸ್ರ ನಾಮಾಂಕಿತವಾದರೂ ಭಾವಾಂಕುರ ಪಾತ್ರ ೊಂದೇ.
     ಭೂಮಿಯ ಮೇಲಿನ ಎಲ್ಲ ಸಾಂಕೇತಿಕ ಧರ್ಮಗಳು ಸಾಂಕೇತಿಕ ದೇವರುಗಳನ್ನು ತಳುಕು ಹಾಕಿಕೊಂಡಿವೆ. ಧರ್ಮ ಅಂದಾಗ ನಂತರದ ಪದವೇ ದೇವರು. ಸದಾಚಾರದ ಧಾರಣೆಯೇ ಧರ್ಮವಲ್ಲವೇ ? ಮನವೆಂಬ ವಿಷದ ಹಾವನ್ನು ನಿಗ್ರಹಿಸಲು ದೇವರ ಧ್ಯಾನ ಅವಶ್ಯಕ. ದೈವತ್ವವನ್ನು ಸಾಧುಸುವುದು ಮಾನವನ ಹಕ್ಕು. ಆದರೆ ಅನೇಕ ಧರ್ಮಗುರುಗಳು ಬಾಹ್ಯಾಚರಣೆಗಳ ಮೂಲಕ ದವರ ಅಸ್ತಿತ್ವವನ್ನು ಢಾಂಬಿಕವಾಗಿ ತೋರಿಸಲೆತ್ನಿಸುತ್ತಾರೆ. ಬಳ್ಳಿಗೆ ಹೂವು ಕಾಯಿ ಭಾರವೇ? ಎಂದು ನಮ್ಮನ್ನು ಬಾಹ್ಯಾಚರಣೆಗೆ ಹಚ್ಚುತ್ತಾರೆ. ಎಲ್ಲಿಯವರೆಗೆ ಅಡ್ಡಪಲ್ಲಕ್ಕಿಯಲ್ಲಿ ನಿಮ್ಮನ್ನು ಹೊತ್ತು ಮೆರೆಸೋಣ? ಚಿನ್ನದ ಕಿರೀಟ ತೊಡಿಸೋಣ? ಏನಿದು ವೈಭವ? ಇದು ದಾಸ್ಯವಲ್ಲದೇ ಮತ್ತೇನು? ನಾನು ನಾನು ಎಂಬ ಭ್ರಮೆ ದೂರಾಗಿ ವೈರಾಗ್ಯದ ಹೆಸರಿನಲ್ಲಿ ದಾಸ ಎಂಬ ಭಾವನೆ ಬರಬೇಕು.
             ಬಸವಣ್ಣನವರು ದೇವರು ಅಂತರ್ ಅರಿವಿನ ದೇವರು. ಚಿನ್ನದ ಮೂರ್ತಿಯ ಬೆಳ್ಳಿ ಕಣ್ಣಿನ ದೇವರಲ್ಲ. ಇಲ್ಲಿ ಶರೀರದ ಪೂಜೆ ಇಲ್ಲ. ಶರೀರದೊಳಗಿರುವ ಆತ್ಮನ ಪೂಜೆ. ಜೀವಾತ್ಮದ ಪೂಜೆ. ಅದುವೇ ಪರಮಾತ್ಮನ ಪೂಜೆ. ಉಣ್ಣದ ದೇವರಿಗೆ ಮೃಷ್ಟಾನ್ನದ ನೈವೇದ್ಯವೇಕೆ? ಉಣ್ಣುವ ಜಂಗಮನಿಗೆ ತಿರಸ್ಕಾರವೇಕೆ? ನಮ್ಮಾತ್ಮ ತೃಪ್ತವಾದರೆ ದೇವರು ಸಂತೈಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ.
         ಮಗುವಿನ ನಗುವಿನಲ್ಲಿ ದೇವರಿರುವನು. ಕೋಗಿಲೆಯ ಇಂಚರದಲ್ಲಿ, ಹಿಮದ ತಂಪಿನಲ್ಲಿ, ಸುಮದ ಸುವಾಸನೆಯಲ್ಲಿ, ದುಂಬಿಯ ಝೇಂಕಾರದಲ್ಲಿ, ಹರಿಸಿನ ರಮ್ಯತೆಯಲ್ಲಿ, ಚಂದ್ರಪ್ರಭೆಯಲ್ಲಿ, ಸೂರ್ಯರಶ್ಮಿಯಲ್ಲಿ ಹಾಗೂ ಪಕ್ಷಿಗಳ ಕಲರವದಲ್ಲಿ  ದೇವರ ಅಸ್ತಿತ್ವ ಕಾಣಲು ಸಾದ್ಯವಿದೆ.
            ಹಾಲ್ತುಂಬಿದ ಆಕಳ ಕೆಚ್ಚಲಿನಂತೆ ಅದೃಶ್ಯನಿದ್ದಾನೆ. ಉರಿಯುತ್ತಿರುವ ಮೇಣದ ಬತ್ತಿಯಂತೆ ಆಕಾರಾತೀತ. ಉದರದೊಳು ಬಚ್ಚಿಟ್ಟ ಬೆಂಕಿಯಂತೆ. ಹಣ್ಣಿನ ರುಚಿಯಂತೆ ದೇವರಿದ್ದಾನೆ. ಅಂತರಂಗ ಅಂತಃಕರಣದಲ್ಲಿ ದೇವರ ಸೌರಭಕ್ಕಾಗಿ ಮೂಗು ಚಾಚು.
        'ಸೃಷ್ಟಿಯನ್ನುಪೂಜಿಸು ಆದರೆ ಸೃಷ್ಟಿಕರ್ತನನ್ನು ಬೇಡ' ಎಂಬ ಏಸುವಿನ ಮಾತು ಸೂಕ್ತವೇ? ದೇವರು ಚೈತನ್ಯ ಸ್ವರೂಪಿ. ಪ್ರಕೃತಿಯಲ್ಲಿ ನಿತ್ಯ ಪರಿವರ್ತನೆ ಇದೆ. ಚೈತನ್ಯವಿದೆ. ಭೌಗೋಳಿಕ ಪರಿವರ್ತನೆಗೆ ಚೈತನ್ಯವೇ ಕಾರಣ. ಸೂರ್ಯನ ಕಿರಣಗಳಲ್ಲಿರುವ ಶಕ್ತಿ ದೇವರು.
    ನಾವಿ ವಿಮಾನದಲ್ಲೋ ರೈಲಿನಲ್ಲೋ ಪ್ರಯಾಣ ಮಾಡುತ್ತೇವೆ. ಆದರೆ ಚಾಲಕ ಮಾತ್ರ ಗೋಚರಿಸುವುದಿಲ್ಲ. ಅಂತೆಯೇ ದೇವರು ಅದೃಶ್ಯ. ಅವನ ಕಾಯಕದಲ್ಲಿ ತಪ್ಪೆಣಿಸುವಂತಿಲ್ಲ. ಗಡಿಯಾರದ ಮುಳ್ಳುಗಳಂತೆ ಪರಿಭ್ರಮಿಸುತ್ತಾನೆ. ಅವನು ಅನಂತಾನಂತ.
             ಜರಗನಳ್ಳಿಯವರು ಹೇಳುವಂತೆ ನಂಬಲು ಸಾಕು
            ಒಂದು ಕವಡೆ ಗಾತ್ರದ ಕಲ್ಲು
            ನೋಡುವ ಕಣ್ಣಿಗೆ ಎಲ್ಲವೂ ಸಾಧಕದ ಪಾಲಿಗೆ
            ನೋಡುವ ಕಣ್ಣಿಗೆ ನೀರು ಸಾಧಕದ ಪಾಲಿಗೆ ಸಾಗರ
 ಅವರವರ ನಂಬಿಕೆ ಮೇಲೆಯೇ ದೇವರ ಅಸ್ತಿತ್ವವಿದೆ. ಕಣ್ಣಿನ ದೃಷ್ಟಿಯಂತೆ, ಮನದ ಮುಂದಣದ ವೇಗದಂತೆ ಆತನ ಅಸ್ತಿತ್ವ ಇದೆ. ನೀರಿನಲ್ಲಿಯ ಪ್ರತಿಫಲನದಂತಿದೆ ಆತನ ಹರವು. ಅವನಿಗೆ ಯಾವುದೇ ಆಕಾರವಿಲ್ಲ. ರೂಪವಿಲ್ಲ, ಬಣ್ಣವಿಲ್ಲ, ವಾಸನೆಯಲ್ಲಿ ಅದೃಶ್ಯನಾಗಿದ್ದಾನೆ. ಅವ್ಯಕ್ತನಾಗಿದ್ದಾನೆ. ಅಮೂರ್ತನಾಗಿದ್ದಾನೆ. ಅದೃಶ್ಯ ದೃಶ್ಯವಾಗಲು, ಅವ್ಯಕ್ತತೆ ವ್ಯಕ್ತವಾಗಲು, ಅಮೂರ್ತ ಮೂರ್ತವಾಗಲು ನಮ್ಮ ಒಳಗಣ್ಣು ಜಾಗೃತವಾಗಬೇಕು. ಅದು ಅರಿವಿನ ಕಣ್ಣು. ಬೆಳಕಿನ ಕಣ್ಣು, ಆ ಕಣ್ಣಿನಲ್ಲಿ ಯಾವ ಬಣ್ಣವಿಲ್ಲ, ಸುಣ್ಣವಿಲ್ಲ. ಅದುವೇ ವಿವೇಕ ಪ್ರಜ್ಞೆಯ ಕಣ್ಣು.
     ಕೆಲವರನ್ನು ದೇವತಾ ಮಾನವ, ದೇವತಾ ಪುರುಷ, ದೈವ ಪುರುಷ ಎಂಬ ಉಪಾದಿಯಲ್ಲಿ ಕರೆಯುವುದುಂಟು. ಯಾವ ವ್ಯಕ್ತಯಲ್ಲಿ ದೈವೀ ಗುಂಗಳು, ಅಪೇಕ್ಷಿತ ನಡವಳಿಕೆಗಳು, ಸಕಾರಾತ್ಮಕ ಸಾಧನೆಗಳು, ಪೂರಕ ವ್ಯಕ್ತಿತ್ವ ಇದ್ದರೆ ಮಾತ್ರ 'ದೇವ ಮಾನವ' ಉಪಾದಿ. ಒಟ್ಟಾರೆ ದೈವತ್ವ ಮತ್ತು ದೈತ್ಯತ್ವದ ಅಂತರವೆಂದರೆ ಸಾತ್ವಿಕತೆ ಹಾಗೂ ಅನೈತಿಕತೆಯೇ ಆಗಿದೆ ವಿನಃ ಯಾವುದೇ ಘನರೂಪದ ದೇವರಲ್ಲ.
        ಭಾರತೀಯ ಹಿಂದು ಸಮಾಜದಲ್ಲಿ ದೇವರನ್ನು ಕೇಂದ್ರೀಕರಿಸಿಕೊಂಡು ಸಾವಿರಾರು ಸಿದ್ಧಾಂತಗಳು, ಪಂಥಗಳು, ಪಂಗಡಗಳು ಅವತಾರ ತಾಳಿವೆ. ದ್ವೈತ್ವ, ಅದ್ವೈತ್ವ, ನಾಥ, ಸಿದ್ಧ ಪರಂಪರೆಗಳು ತಮ್ಮದೇ ಆದ ನಿಯಮಗಳನ್ನು ನಿರೂಪಿಸಿಕೊಂಡು ವ್ಯಕ್ತಿಯನ್ನು ಶೂನ್ಯದ ಕಕ್ಷೆಯಲ್ಲಿ ನಿಲ್ಲಿಸಿವೆ. ದೇವರು ಎಂಬ ಹುತ್ತದಲ್ಲಿ ಅನೇಕ ವಿಷದ ಹಾವುಗಳು ಸೇರಿಕೊಂಡಿವೆ. ಮೂಢನಂಬಿಕೆಗಳು, ಕಂದಾಚಾರಗಳು, ಮೂಢಾಚಾರಗಳು, ಅನಿಷ್ಟ ಆಚರಣೆಗಳು ಹುತ್ತದಲ್ಲಿ ಮರಿ ಹಾಕುತ್ತಿವೆ. ವೈಚಾರಿಕ ಪ್ರಜ್ಞೆ ಎಂಬ ಬಡಿಗೆಯಿಂದ ಬಡಿದರೆ ವಿಷಜಂತುಗಳು ಸರ್ವನಾಶವಾಗಿ ಸದಾಚಾರ, ಸದ್ವಿವೇಕವೆಂಬ ದೈವತ್ವ ಸದೃಶ್ಯವಾಗುತ್ತದೆ.
          ಸ್ವಾರ್ಥಕ್ಕಾಗಿ ಅಜ್ಞಾನದಿಂದ ನಾಲಿಗೆ ಚಪಲಕ್ಕಾಗಿ ಕುರಿ, ಕೋಳಿ,ಕೋಣಗಳನ್ನು ನಿರ್ದಯವಾಗಿ ಬಲಿಕೊಡುವುದು ನಿಲ್ಲಬೇಕು.ಬೆತ್ತಲೆ ಸೇವೆ, ಕತ್ತಲ ಸೇವೆ, ಸ್ಥಗಿತಗೊಳ್ಳಬೇಕು. ಅಮಾಯಕರನ್ನು ನಂಬಿಸಿ ಹಬ್ಬದ ಹರಕೆ ಕುರಿ ಮಾಡುವುದು ಬೇಡ. ದೇವರ ಹೆಸರಿನಲ್ಲಿ ದಂಡಪಿಂಡಗಳೀಗೆ ಕೂಳೇಕೆ? ಹಸಿದವಂಗೆ ಕಾಳು ಕೊಡಿ, ಹತಾಶಯದ ಬದುಕಿಗೆ ಪ್ರೀತಿಯ ಸಿಂಚನ ಮಾಡಿ. ಚಿನ್ನದ ಕಾಳಿಗೆ ತಡಕಾಡುವವರಿಗೆ ಅನ್ನದ ಕಾಳಿನ ಅರಿವು ಮಾಡಿಕೊಡಿ. ಅನ್ನದಲ್ಲಿಯೇ ದೇವರಿದ್ದಾನೆ, ದೈವತ್ವದಲ್ಲಿ ಸದಾಚಾರವಿದೆ. ಸದಾಚಾರದಲ್ಲಿಯೇ ಮಾನವೀಯ ಮೌಲ್ಯಗಳಿವೆ. ಈ ಮೌಲ್ಯಗಳೆಂಬ ಮಂಟಪದಲ್ಲಿ ಜೀವಾತ್ಮನೇ ದೇವರು. ಸಾಕ್ಷಾತ್ಕಾರಗಳೆಂಬ ಫಲ ಪುಷ್ಪಗಳಿಂದ ಪೂಜಿಸಿದಾಗ ಮಾತ್ರ ವೈಚಾರಿಕ ಸಮಾಜ ನಿರ್ಮಾಣ ಸಾಧ್ಯವಾದೀತು.
                       
                                                 ---ಹುಸೇನ್ ಬಾಷಾ ಅ.ಮುರುಗಾನೂರ
                                                                      ಸಹ ಶಿಕ್ಷಕರು
                                                      ಸರ್ಕಾರಿ ಪ್ರೌಢ ಶಾಲೆ, ಇಜೇರಿ
                                                        ತಾ||ಜೇವರ್ಗಿ, ಜಿ|| ಗುಲ್ಬರ್ಗಾ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....