ಅಹಂಕಾರದೊಂದಿಗೆ ಪ್ರೀತಿ ಸೇರಿಕೊಂಡಾಗ...(ಮಾನಸ ದಲ್ಲಿ ಪ್ರಕಟಗೊಂಡ ಲೇಖನ)

ದೊಂದು ಸುಂದರವಾದ ದ್ವೀಪ. ಅದು ನೋಡಲಿಕ್ಕೆ ತುಂಬಾ ಚಿಕ್ಕದೇ. ಆದರೆ ಅದರ ಮನಸ್ಸು ವಿಶಾಲವಾದದ್ದು. ಅಲ್ಲಿ ಏನಿತ್ತು? ಏನಿಲ್ಲ ಎಂದೆಲ್ಲ. ಎಲ್ಲವೂ ಇತ್ತು. ಆದ್ದರಿಂದಲೇ ಆ ದ್ವೀಪ ಸಮೃದ್ಧವಾಗಿತ್ತು. ಅಲ್ಲಿ ಒಂದಿಷ್ಟು ಭಾವನೆಗಳು ನೆಲೆಸಿದ್ದವು. ಅದೂ ಅವೆಲ್ಲವೂ ಸುಮಧುರವಾದ ಭಾವನೆಗಳು. ಪ್ರೀತಿ, ಪ್ರೇಮ, ವಾತ್ಸಲ್ಯ, ಮಮತೆ, ಕರುಣೆ, ಸಹಾನುಭೂತಿ, ಸ್ನೇಹ, ಅಹಂಕಾರ..ಹೀಗೆ ಅನೇಕ ಭಾವನೆಗಳು ಆ ದ್ವೀಪದಲ್ಲಿ ಬದುಕುತ್ತಿದ್ದವು. ಎಲ್ಲಾ ಭಾವನೆಗಳಿಗೂ ಅವುಗಳದ್ದೇ ಬದುಕು. ಅವುಗಳದ್ದೇ ಖದರ್ರು.ಕೆಲವು ಭಾವನೆಗಳು ಬೇರೆ ಭಾವನೆಗಳೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರೆ, ಇನ್ನು ಕೆಲವು ಭಾವನೆಗಳು ಸುತಾರಾಂ ಇದಕ್ಕೆ ಒಪ್ಪುತ್ತಿರಲಿಲ್ಲ. ಅವುಗಳಿಗೆ ಅವುಗಳದ್ದೇ ಹೆಚ್ಚು ಎನ್ನುವಂತ್ತಿತ್ತು.
          ಈ ಎಲ್ಲಾ ಭಾವನೆಗಳೀಗೆ ನಾಯಕನಂತಿತ್ತು ಪ್ರೀತಿ. ಉಳಿದೆಲ್ಲ ಭಾವನೆಗಳಿಗೆ ಪ್ರೀತಿ ಎಂದರೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದಲೇ ಅಲ್ಲಿ ವೈಮನಸ್ಸು ಎನ್ನುವುದು ಅಷ್ಟಾಗಿ ಇರಲಿಲ್ಲ.
ಅದೊಂದು ಕರಾಳ ದಿನ. ದ್ವೀಪ ಆವರಿಸಿಕೊಂಡಿದ್ದ ನದಿಯಲ್ಲಿ ಪ್ರವಾಹ ಉಂಟಾಯಿತು. ನೀರು ಕ್ಷಣ ಕ್ಷಣಕ್ಕೂ ಹೆಚ್ಚಾಗಲಾರಂಭಿಸಿತು. ಅಲೆಗಳು ದ್ವೀಪದ ನೆಲವನ್ನು ಆವರಿಸಿಕೊಳ್ಳಲಾರಂಭಿಸಿದವು. ದ್ವೀಪ ಹಂತ ಹಂತವಾಗಿ ಮುಳುಗತೊಡಗಿತು. ಎಲ್ಲವೂ ಮುಗಿದೇ ಹೋಯಿತು ಎಂದು ಎಲ್ಲರೂ ಅಂದುಕೊಂಡರೆ ಪ್ರೀತಿ ಮಾತ್ರ ಧೃತಿಗೆಡಲಿಲ್ಲ. ಅದು ತಾಳ್ಮೆಯಿಂದಲೆ ಅಲ್ಲಲ್ಲಿ ಓಡಾಡಿ, ಏನೇನೋ ತಂದು ಒಂದು ದೋಣಿಯನ್ನು ತಯಾರು ಮಾಡಿತು. ದ್ವೀಪದಲ್ಲಿದ್ದ ಎಲ್ಲಾ ಭಾವನೆಗಳನ್ನು ಕರೆದು ಅದರಲ್ಲಿ ಕೂರುವಂತೆ ಹೇಳಿತು. ತಾನೂ ಕುಳಿತುಕೊಂಡಿತು. ಇನ್ನೇನೂ ಮುಳುಗುವ ದ್ವೀಪದಿಂದ ಬದುಕಿ ಬೇರೆಡೆ ಹೋದರೆ ಸಾಕು ಎಂದು ಎಲ್ಲರೂ ನಿರ್ಧರಿಸಿ ದೋಣಿಯನ್ನು ಹೊರಡಿಸಬೇಕು ಎನ್ನುವಷ್ಟರಲ್ಲಿ ಅಹಂಕಾರ ಮಾತ್ರ ದೋಣಿಯಲ್ಲಿ ಕಾಣಿಸಲಿಲ್ಲ. ಅದು ಮುಳುಗುವ ದ್ವೀಪದ ತನ್ನ ಮನೆಯೊಳಗೇ ಇತ್ತು. ಕರೆದರೆ ಬರಲು ಒಪ್ಪಲಿಲ್ಲ.
             ಕೊನೆಗೆ ಪ್ರೀತಿಯೆ ದೋಣಿಯಿಂದ ಕೆಳಗಿಳಿದು ಅಹಂಕಾರದ ಮನೆಯ ಹತ್ತಿರ ಹೋಗಿ  ಬಾ ಎಂದು ಪರಿಪರಿಯಾಗಿ ಕೇಳಿಕೊಂಡಿತು. ಎಷ್ಟೇ ಕರೆದರೂ, ಯಾರೆ ಕರೆದರೂ ಅಹಂಕಾರ ಮಾತ್ರ ಬರಲು ಒಪ್ಪಿಕೊಳ್ಳಲಿಲ್ಲ. ಎಷ್ಟೇ ಆದರೂ ಅದು ಅಹಂಕಾರವಲ್ಲವೇ? ಅದು ತನ್ನ ಅಹಂಕಾರವನ್ನು ಎಲ್ಲಿ ಬಿಟ್ಟುಕೊಟ್ಟಿತು? ಅದು ತನ್ನದೆ ಅಹಂಕಾರದಲ್ಲಿ ಗಟ್ಟಿಯಾಗಿ ಕುಳಿತು ಬಿಟ್ಟಿತು. ಇನ್ನೇನು ದ್ವೀಪ ಮುಳುಗಲು ಬಂದಿತು. ದೋಣಿ ಹೊರಡದೇ ಬೇರೆ ದಾರಿಯೇ ಇರಲಿಲ್ಲ. ಬೇರೆಲ್ಲ ಭಾವನೆಗಳು ಸೇರಿಕೊಂಡು ಪ್ರೀತಿಯನ್ನು ಅದು ಅಲ್ಲೇ ಇರಲಿ, ನೀನಾದರೂ ಬಾ ನಾವು ಹೊರಟುಬಿಡೋಣ ಎಂದು ಕೈ ಕೈ ಮುಗಿದು ಕೇಳಿಕೊಂಡವು. ಕೂಗಿ ಕರೆದವು. ಆದರೆ ಪ್ರೀತಿಗೆ ಅಹಂಕಾರವನ್ನು ಬಿಟ್ಟು ಬರಲು ಮನಸ್ಸಾಗಲಿಲ್ಲ.ಪ್ರೀತಿಗೆ ಎಲ್ಲರ ಮೇಲೂ ಪ್ರೀತಿ. ಆದ್ದರಿಮದಲೆ ಪ್ರೀತಿ ಅಹಂಕಾರದ ಜೊತೆಯೆ ಉಳಿದುಕೊಂಡುಬಿಟ್ಟಿತು. ದ್ವೀಪದ ತುದಿ ಮಾತ್ರ ಕಾಣುವಂತೆ ಪ್ರವಾಹದ ಅಲೆಗಳು ಎಲ್ಲವನ್ನೂ ಮುಳುಗಿಸುತ್ತಾ ಬಂದವು. ಆಗ ಉಳಿದೆಲ್ಲ ಭಾವನೆಗಳು ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ದ್ವೀಪವನ್ನು ಬಿಟ್ಟು ದೂರಕ್ಕೆ ಸಾಗಿದವು. ಕೊನೆಯಲ್ಲಿ ಪ್ರೀತಿ ಅಹಂಕಾರದಿಂದಾಗಿ ಸಾಯಬೇಕಾಯಿತು.
        ಆದ್ದರಿಂದಲೆ ಪ್ರೀತಿಯಲ್ಲಿ ಅಹಂಕಾರ ಸೇರಬಾರದು ಎನ್ನುವುದು. ಅಹಂಕಾರದೊಂದಿಗೆ ಪ್ರೀತಿ ಸೇರಿದರೆ ಅಥವಾ ಅಹಂಣಕಾರವನ್ನೇ ಪ್ರೀತಿಸಿಕೊಂಡರೆ ಬದುಕು ಉಳಿಯಲಾರದು. ಮುಳುಗುತ್ತದೆ. ಪ್ರೀತಿ ಬದುಕಿನಲ್ಲಿ ಕೊನೆಯತನಕ ಇರಬೇಕೆಂದರೆ ಅಹಂಕಾರದಿಂದ ದೂರ ಇರಬೇಕು. ಆಗ ಮಾತ್ರ ಪ್ರೀತಿ ಬದುಕಾಗುತ್ತದೆ. ಬೆಳಗುತ್ತದೆ. 
                                             ----ಸಚಿನ್ ಕುಮಾರ ಬಿ.ಹಿರೇಮಠ, ಜೇವರ್ಗಿ

Comments

Popular posts from this blog

ಪ್ರೀತ್ಸೋಕೆ ಏನು ಬೇಕು....?

ಚಿಮ್ಮು ಅರಿವಿನ ನಭಕೆ..

ಶಕ್ತ

ಸುತ್ತ ಸುಳಿವವಳೇ...

ನಿರೀಕ್ಷೆ

ಸಾಕಿನ್ನು ಸೇರಿರೈ ಮನುಜ ಮತಕೆ.....

ಕನಸುಗಳು...

ಜತೆಯಾದರೆ ನೀವು....

ಹೊದಿಕೆ

ಹುಡುಕಬೇಕಿದೆ....